ನವದೆಹಲಿ: ರೈಲು ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ಟಿಕೆಟ್ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಲು ಭಾರತೀಯ ರೈಲ್ವೆ ಇಲಾಖೆ ಇಂದಿನಿಂದ (ಜನವರಿ 12, 2026) ಐತಿಹಾಸಿಕ ಬದಲಾವಣೆಯೊಂದನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಆಧಾರ್ ದೃಢೀಕೃತ IRCTC ಬಳಕೆದಾರರಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ವಿಶೇಷ ಆದ್ಯತೆ ಸಿಗಲಿದೆ.
ಹಂತ ಹಂತವಾಗಿ ವಿಸ್ತರಣೆಯಾದ ಬುಕಿಂಗ್ ಸಮಯ
ಟಿಕೆಟ್ ಬುಕಿಂಗ್ ವಿಂಡೋ ಸಮಯವನ್ನು ರೈಲ್ವೆ ಇಲಾಖೆ ಕಳೆದ ಕೆಲವು ದಿನಗಳಿಂದ ಹಂತ ಹಂತವಾಗಿ ವಿಸ್ತರಿಸುತ್ತಾ ಬಂದಿದೆ. ಈ ಹಿಂದೆ ಇದ್ದ ನಿಯಮಗಳಿಗೂ ಈಗಿನ ಬದಲಾವಣೆಗೂ ಇರುವ ವ್ಯತ್ಯಾಸ ಇಲ್ಲಿದೆ:
ಮೊದಲು: ಕೇವಲ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಅವಕಾಶವಿತ್ತು.
ಜನೆವರಿ 5: ಈ ಸಮಯವನ್ನು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ವಿಸ್ತರಿಸಲಾಗಿತ್ತು.
ಇಂದಿನಿಂದ (ಜ.12): ಆಧಾರ್ ವೆರಿಫೈಡ್ ಬಳಕೆದಾರರು ಬೆಳಿಗ್ಗೆ 8 ರಿಂದ ಮಧ್ಯರಾತ್ರಿ 12 ರವರೆಗೆ ಟಿಕೆಟ್ ಬುಕ್ ಮಾಡಬಹುದು!
ನೈಜ ಪ್ರಯಾಣಿಕರಿಗೆ ಮಾತ್ರ ಫಸ್ಟ್ ಚಾನ್ಸ್
ಮುಂಗಡ ಕಾಯ್ದಿರಿಸುವಿಕೆ ಅವಧಿ (ARP) ಆರಂಭವಾಗುವ ಮೊದಲ ದಿನದಂದು ಟಿಕೆಟ್‌ಗಳಿಗಾಗಿ ಭಾರಿ ಪೈಪೋಟಿ ಇರುತ್ತದೆ. ಇದನ್ನು ದುರುಪಯೋಗಪಡಿಸಿಕೊಳ್ಳುವ ದಲ್ಲಾಳಿಗಳು ಬಾಟ್ ಮತ್ತು ನಕಲಿ ಖಾತೆಗಳ ಮೂಲಕ ಕ್ಷಣಾರ್ಧದಲ್ಲಿ ಟಿಕೆಟ್ ಕಬಳಿಸುತ್ತಿದ್ದರು. ಇದನ್ನು ತಡೆಯಲು ಈಗ ಆಧಾರ್-ಪರಿಶೀಲಿಸಿದ ಬಳಕೆದಾರರಿಗೆ ಮಾತ್ರ ಮೊದಲ ದಿನದ ಬುಕಿಂಗ್‌ಗೆ ಅವಕಾಶ ನೀಡಲಾಗುತ್ತಿದೆ.
ಗಮನಿಸಬೇಕಾದ ಪ್ರಮುಖ ಅಂಶಗಳು:
ಈ ಹೊಸ ನಿಯಮ IRCTC ವೆಬ್‌ಸೈಟ್ ಮತ್ತು ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ಮಾತ್ರ ಅನ್ವಯಿಸುತ್ತದೆ.
ರೈಲ್ವೆ ನಿಲ್ದಾಣದ ಕೌಂಟರ್‌ಗಳಲ್ಲಿ ಟಿಕೆಟ್ ಪಡೆಯುವವರಿಗೆ ಹಳೆಯ ನಿಯಮಗಳೇ ಮುಂದುವರಿಯಲಿವೆ.
ಆಧಾರ್ ಕೆವೈಸಿ (KYC) ಮಾಡಿಸುವುದರಿಂದ ನೈಜ ಪ್ರಯಾಣಿಕರನ್ನು ಗುರುತಿಸಲು ರೈಲ್ವೆ ಇಲಾಖೆಗೆ ಸುಲಭವಾಗಲಿದ್ದು, ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಲಿದೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದಾಗಿ ಸಾಮಾನ್ಯ ಜನರಿಗೆ, ವಿಶೇಷವಾಗಿ ಹಬ್ಬದ ದಿನಗಳಲ್ಲಿ ಮೊದಲೇ ಪ್ಲಾನ್ ಮಾಡುವವರಿಗೆ ದೊಡ್ಡ ಅನುಕೂಲವಾಗಲಿದೆ. ಆದರೆ, ಈ ಸೌಲಭ್ಯ ಪಡೆಯಲು ನಿಮ್ಮ IRCTC ಪ್ರೊಫೈಲ್‌ನಲ್ಲಿ ಆಧಾರ್ ಲಿಂಕ್ ಇರುವುದು ಈಗ ಅನಿವಾರ್ಯ

