ಮುಂಬೈ ಬಿಎಂಸಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದೆ. ಇದರ ನಡುವೆ ಶಿವಸೇನೆ (UBT) ಶಾಸಕ ಆದಿತ್ಯ ಠಾಕ್ರೆ ಅವರು ಖಾಸಗಿ ಸಂಭಾಷಣೆಯಲ್ಲಿದ್ದಾಗ ಮಹಿಳಾ ವರದಿಗಾರ್ತಿಯೊಬ್ಬರು ಅಡ್ಡಿಪಡಿಸಿದ ಘಟನೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (BKC) ನಡೆದಿದೆ.
ನಡೆದಿದ್ದೇನು? ಆದಿತ್ಯ ಠಾಕ್ರೆ ಅವರು ಹಿರಿಯ ಸಂಪಾದಕರೊಬ್ಬರ ಜೊತೆ ಖಾಸಗಿಯಾಗಿ ಮಾತನಾಡುತ್ತಿದ್ದಾಗ, ಟೆಲಿವಿಷನ್ ಚಾನೆಲ್‌ನ ವರದಿಗಾರ್ತಿಯೊಬ್ಬರು ಮಧ್ಯಪ್ರವೇಶಿಸಿ, “ಮರಾಠಾ ಅಸ್ಮಿತೆಯ ಹೆಸರಿನಲ್ಲಿ ಜನರ ಮೇಲೆ ಹಲ್ಲೆ ಮಾಡುವುದು ನ್ಯಾಯವೇ?” ಎಂದು ಪ್ರಶ್ನಿಸಿದ್ದಾರೆ. ಮೊದಲು ಶಾಂತವಾಗಿಯೇ ಪ್ರತಿಕ್ರಿಯಿಸಿದ ಆದಿತ್ಯ, “ನಾನು ಖಾಸಗಿ ಸಂಭಾಷಣೆಯಲ್ಲಿದ್ದೇನೆ, ದಯವಿಟ್ಟು ಗೌರವಯುತವಾಗಿ ವರ್ತಿಸಿ ಮತ್ತು ಮಧ್ಯಪ್ರವೇಶಿಸಬೇಡಿ” ಎಂದು ಮನವಿ ಮಾಡಿದರು.
ಆದಿತ್ಯ ಕೆಂಡಾಮಂಡಲ: ಆದಿತ್ಯ ಅವರ ವಿನಂತಿಯ ಹೊರತಾಗಿಯೂ ವರದಿಗಾರ್ತಿ ಪದೇ ಪದೇ ಅದೇ ಪ್ರಶ್ನೆಯನ್ನು ಕೇಳುತ್ತಾ ಸಂಭಾಷಣೆಗೆ ಅಡ್ಡಿಪಡಿಸಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಆದಿತ್ಯ ಠಾಕ್ರೆ, “ಇದೇನು ನಡವಳಿಕೆ? ಇದೇನು ಕ್ರಿಮಿನಲ್ ನಡವಳಿಕೆಯೇ?” ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ.
ಚುನಾವಣಾ ಚಿತ್ರಣ: ಮುಂಬೈ ಬಿಎಂಸಿಯ 227 ವಾರ್ಡ್‌ಗಳಿಗೆ ಜನವರಿ 15ರಂದು ಮತದಾನ ನಡೆಯಲಿದ್ದು, ಜನವರಿ 16ರಂದು ಫಲಿತಾಂಶ ಪ್ರಕಟವಾಗಲಿದೆ.
- ಒಂದು ಕಡೆ ಎಂಎನ್‌ಎಸ್ (MNS) ಮತ್ತು ಶಿವಸೇನೆ (UBT) ಮೈತ್ರಿಕೂಟ ಬಲ ಪ್ರದರ್ಶಿಸುತ್ತಿದೆ.
- ಇನ್ನೊಂದೆಡೆ ಬಿಜೆಪಿ ಮತ್ತು ಶಿಂಧೆ ಬಣದ ಶಿವಸೇನೆ ಜಿದ್ದಾಜಿದ್ದಿಗೆ ಇಳಿದಿದೆ.
- ಜನವರಿ 11ರಂದು ಶಿವಾಜಿ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ರ್‍ಯಾಲಿಗಳು ಮುಂಬೈ ಚುನಾವಣೆಯ ದಿಕ್ಸೂಚಿಯಾಗಲಿವೆ.

