ಬೆಂಗಳೂರು: ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಗೆ ಅವಕಾಶ ಇಲ್ಲದಂತೆ ಬೇಡಿಕೆಯ ಅನುಸಾರ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸೂಚನೆ ನೀಡಿದ್ದಾರೆ.
ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಶುಕ್ರವಾರ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿ ಸೂಚನೆ ನೀಡಿದ್ದಾರೆ.
ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯಲ್ಲಿ ಸಮನ್ವಯತೆ ಸಾಧಿಸಲು ಅಗತ್ಯವಿರುವ ವಿದ್ಯುತ್ ಉತ್ಪಾದನೆ ಮತ್ತು ಖರೀದಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಮಾರ್ಚ್ ನಿಂದ ಮೇ ಅಂತ್ಯದವರೆಗೆ ಮೂರು ತಿಂಗಳಲ್ಲಿ ವಿದ್ಯುತ್ ಬೇಡಿಕೆ ಎಷ್ಟಾಗಬಹುದು ಎಂಬುದನ್ನು ಈಗಲೇ ಲೆಕ್ಕಚಾರ ಹಾಕಿ ಅದಕ್ಕೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲು ವಿದ್ಯುತ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಹಗಲು ವೇಳೆಯಲ್ಲಿ ಸೌರ ವಿದ್ಯುತ್ ಹೇರಳವಾಗಿ ಲಭ್ಯವಿದೆ. ಅದನ್ನು ಬಳಕೆ ಮಾಡಿಕೊಂಡು ರಾತ್ರಿಯ ವೇಳೆ ಜಲ ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡುವ ಮೂಲಕ ಪೂರೈಕೆ ಮತ್ತು ಉತ್ಪಾದನೆಯಲ್ಲಿ ಸಮತೋಲನ ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ.
ಕೆಲವು ಕಡೆ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆಯಲ್ಲಿ 7 ಗಂಟೆ ನಿರಂತರ ವಿದ್ಯುತ್ ಪೂರೈಸಲಾಗುತ್ತಿದೆ. ಪ್ರಸ್ತುತ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಾಗಿರುವುದರಿಂದ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆಯಲ್ಲಿ ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಸೂಚಿಸಿದ್ದಾರೆ.
ವಿನಿಮಯ ಅಥವಾ ದೀರ್ಘಾವಧಿ ಖರೀದಿ ಆಧಾರದಲ್ಲಿ ಅನ್ಯ ರಾಜ್ಯಗಳಿಂದ ವಿದ್ಯುತ್ ಪಡೆಯಲು, ಸಕ್ಕರೆ ವಿದ್ಯುತ್ ಉತ್ಪಾದನೆ ಮಾಡುವ ಕಾರ್ಖಾನೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸೂಚಿಸಿದ್ದಾರೆ.
ಸಭೆಯಲ್ಲಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್. ಶಿವಶಂಕರ್ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಲ್. ವೈಶಾಲಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಆರ್. ಜಯಕುಮಾರ್, ಸೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲರಾಜು ಮೊದಲಾದವರು ಇದ್ದರು.

