ಕರ್ನಾಟಕ ಸರ್ಕಾರ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಕಾರ್ಯವನ್ನು ಮಾಡುತ್ತಿದೆ. ಆದರೆ ಸೈಬರ್ ಅಪರಾಧಿಗಳು ಮಹಾನಗರ ಪಾಲಿಕೆ ಇ-ಸ್ವತ್ತು ಸರ್ವರ್ ಹ್ಯಾಕ್ ಮಾಡಿ ಅಕ್ರಮವಾಗಿ 5 ಆಸ್ತಿಯ ಇ-ಸ್ವತ್ತುಗಳಿಗೆ ಅನುಮೋದನೆ ನೀಡಿದ್ದಾರೆ.
ಈ ಘಟನೆ ನಡೆದಿರುವುದು ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ. ಅಧಿಕಾರಿಗಳ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಬಳಕೆ ಮಾಡಿಕೊಂಡು ಸರ್ವರ್ ಹ್ಯಾಕ್ ಮಾಡಲಾಗಿದೆ. ಈ ಘಟನೆ ನಡೆದ 6 ತಿಂಗಳ ಬಳಿಕ ಇದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಇ-ಸ್ವತ್ತು ಎಂಬುದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನಿರ್ವಹಿಸುವ ಒಂದು ಆನ್‌ಲೈನ್ ಪೋರ್ಟಲ್ ಆಗಿದೆ. ಇದನ್ನು ಹ್ಯಾಕ್ ಮಾಡಿ ತಮಗೆ ಬೇಕಾದ 5 ಆಸ್ತಿಗಳಿಗೆ ಅಕ್ರಮವಾಗಿ ಇ-ಸ್ವತ್ತು ನೀಡಲಾಗಿದೆ.
ಪೊಲೀಸರಿಗೆ ದೂರು: ಇ-ಸ್ವತ್ತು ಸರ್ವರ್ ಹ್ಯಾಕ್ ಆಗಿರುವ ಕುರಿತು ಮಹಾನಗರ ಪಾಲಿಕೆ ವಲಯ ಕಚೇರಿ-1ರ ಆಯುಕ್ತ ಕೆ.ನಾಗರಾಜ್ ದೂರು ನೀಡಿದ್ದಾರೆ. ಪಾಲಿಕೆ ವ್ಯಾಪ್ತಿಯ 3 ವಲಯ ಕಚೇರಿಗಳಲ್ಲಿ ಇ-ಸ್ವತ್ತು ನಿರ್ವಹಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಯಾವ ಕಚೇರಿಯಲ್ಲಿ ಅಕ್ರಮ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಅಧಿಕಾರಿಗಳ ದೂರಿನ ವಿವರದ ಅನ್ವಯ 2025ರ ಜೂನ್ 12ರಿಂದ ನವೆಂಬರ್ 27ರ ಅವಧಿಯಲ್ಲಿ ಈ ಕೃತ್ಯ ಮಾಡಲಾಗಿದೆ. ವಲಯ ಕಚೇರಿಯ ಅಧಿಕಾರಿಗಳ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಕೆ ಮಾಡಲಾಗಿದೆ.
ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ಬಾರದೇ ಇ–ಸ್ವತ್ತು ಅನುಮೋದನೆ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ಹ್ಯಾಕ್ ಆಗಿರುವುದು ತಿಳಿದುಬಂದಿದೆ. ತಕ್ಷಣ ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಒಟ್ಟು 35 ವಾರ್ಡ್‌ಗಳಿವೆ. ಇ-ಸ್ವತ್ತು ಕಚೇರಿಗಳಲ್ಲಿ ಆಸ್ತಿಗಳಿಗೆ ಹೊಸ ಖಾತೆ, ವರ್ಗಾವಣೆ ಮುಂತಾದ ಪ್ರಕ್ರಿಯೆಗಳು ವಲಯ ಆಯುಕ್ತರ ಲಾಗಿನ್ ಮೂಲಕ ಅನುಮೋದನೆ ಪಡೆಯುವ ವ್ಯವಸ್ಥೆ ಇದೆ.
ಈ ಬಗ್ಗೆ ಖಚಿತವಾದ ಮಾಹಿತಿ ಹೊಂದಿರುವವರು ಅಧಿಕಾರಿಗಳ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ದುರ್ಬಳಕೆ ಮಾಡಿಕೊಂಡಿದ್ದಾರೆ. ನಗರದ ನಿಟುವಳ್ಳಿ, ಶಿವಕುಮಾರಸ್ವಾಮಿ ಬಡಾವಣೆ ಹಾಗೂ ದೊಡ್ಡಬೂದಿಹಾಳ್ ವ್ಯಾಪ್ತಿಯ 5 ಆಸ್ತಿಗಳಿಗೆ ಬೇರೆ ಬೇರೆ ವಲಯ ಕಚೇರಿಗಳಲ್ಲಿ ಅನುಮೋದನೆ ಮಾಡಿಕೊಳ್ಳಲಾಗಿದೆ.
ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ನಿರ್ವಹಿಸಲು ಕರ್ನಾಟಕ ಸರ್ಕಾರ ಇ- ಸ್ವತ್ತು ಎಂಬ ಆನ್‌ಲೈನ್ ಪೋರ್ಟಲ್ ಪ್ರಾರಂಭಿಸಿದೆ. ಆದರೆ ಈ ತಂತ್ರಾಶದಲ್ಲಿ ಹಲವು ದೋಷಗಳಿವೆ ಎಂದು ಜನರು ಆರೋಪಿಸಿದ್ದರು. ಆದ್ದರಿಂದ ಈಗ ಪರಿಷ್ಕೃತ ಇ-ಸ್ವತ್ತು 2.0 ತಂತ್ರಾಶವನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಲಾಗಿದೆ. ಇ-ಸ್ವತ್ತು ಪ್ರಕ್ರಿಯೆ ಹಾಗೂ ತಂತ್ರಾಂಶವನ್ನು ಹೆಚ್ಚು ನಾಗರಿಕಸ್ನೇಹಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.

