ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಚಾಕು ಇರಿತ ಪ್ರಕರಣ ಮುಂದುವರೆದಿದೆ. ಕೆಲ ದಿನಗಳ ಹಿಂದಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್ ಹೆಬ್ಬಾಳಕರ್ ಕಾರು ಚಾಲಕ ಬಸವಂತ್ ಎಂಬುವವರಿಗೆ ದುಷ್ಕರ್ಮಿಗಳು ಹಾಡಹಗಲೇ ಚಾಕು ಇರಿದು ಪರಾರಿಯಾಗಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಅಂತದ್ದೇ ಮತ್ತೊಂದು ಘಟನೆ ನಡೆದಿದೆ.
ಜಾಮೀನಿನ ಮೇಲೆ ಹೊರ ಬಂದ ಆರೋಪಿಯೊಬ್ಬ, ತನ್ನನ್ನು ಕಣ್ಣೆತ್ತಿ ನೋಡಿದ್ದಕ್ಕೆ ವ್ಯಕ್ತಿಯೋರ್ವನಿಗೆ ಹಾಡಹಗಲೇ ಚಾಕು ಇರಿದು ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಬೆಳಗಾವಿಯ ನ್ಯೂಗಾಂಧಿನಗರ ಮಸೀದಿ ಮುಂದೆ ಈ ಘಟನೆ ನಡೆದಿದೆ.
ಜುಶಾನ್ ಚಾವುಸ್ (18) ಎಂಬಾತನಿಗೆ ಮುಜಾಮ್ಮಿಲ್ ಎಂಬಾತ ಚಾಕು ಇರಿದಿದ್ದಾನೆ. ಶುಕ್ರವಾರದ ನಮಾಜ್ ಮುಗಿಸಿ ಜುಶಾನ್ ಮಸೀದಿಯಿಂದ ಹೊರಬರುತ್ತಿದ್ದ ವೇಳೆ ತನ್ನನ್ನು ಕಣ್ಣೆತ್ತಿ ನೋಡಿದ ಎಂಬ ಕಾರಣಕ್ಕೆ ಮುಜಾಮ್ಮಿಲ್ (24)ಗಲಾಟೆ ಆರಂಭಿಸಿದ್ದು, ಈ ವೇಳೆ ಚಾಕು ಇರಿದು ಪರಾರಿಯಾಗಿದ್ದಾನೆ. ಮುಜಾಮ್ಮಿಲ್ ತಿಂಗಳ ಹಿಂದಷ್ಟೇ ಜಾಮೀನು ಪಡೆದು ಜೈಲಿನಿಂದ ಬಿಡುಡೆಯಾಗಿ ಬಂದಿದ್ದ.
ಚಾಕು ಇರಿತದಿಂದ ಗಾಯಗೊಂಡಿರುವ ಜುಶಾನ್ ನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದೆ. ಸದ್ಯ ಆರೋಪಿ ಮುಜಾಮ್ಮಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

