HomeIndiaಬಿಜೆಪಿ-ಕಾಂಗ್ರೆಸ್ ಮೈತ್ರಿ, ಮೇಯರ್ ಪಟ್ಟ: ಇದೆಂಥ ರಾಜಕೀಯ ಅಂದ್ರು ಜನ!

ಬಿಜೆಪಿ-ಕಾಂಗ್ರೆಸ್ ಮೈತ್ರಿ, ಮೇಯರ್ ಪಟ್ಟ: ಇದೆಂಥ ರಾಜಕೀಯ ಅಂದ್ರು ಜನ!

ಬಿಜೆಪಿ-ಕಾಂಗ್ರೆಸ್ ರಾಜಕೀಯ ಎದುರಾಳಿಗಳು. ಇಡೀ ಭಾರತ ಕಾಂಗ್ರೆಸ್ ಮುಕ್ತವಾಗಬೇಕು ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ ಮೇಯರ್ ಪಟ್ಟಕ್ಕಾಗಿ ಕಾಂಗ್ರೆಸ್-ಬಿಜೆಪಿ ಮೈತ್ರಿ ಮಾಡಿಕೊಂಡಿರುವ ರಾಜಕೀಯ ಬೆಳವಣಿಗೆ ನಡೆದಿದೆ.

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತು ಮಹಾರಾಷ್ಟ್ರ ರಾಜ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಪುಣೆ ಜಿಲ್ಲೆಯ ಅಂಬರ್ನಾಥ್ ನಗರಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದು, ಈಗ ಚರ್ಚೆ, ವಿವಾದಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರ ರಾಜ್ಯದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆಯನ್ನು ಅಧಿಕಾರದಿಂದ ದೂರ ಇಡಲು ಈ ಅಚ್ಚರಿಯ ಮೈತ್ರಿ ನಡೆದಿದೆ. ಡಿಸೆಂಬರ್ 20ರಂದು ನಡೆದ ಅಂಬರ್ನಾಥ್ ನಗರಸಭೆಯ 60 ಸ್ಥಾನಗಳ ಚುನಾವಣೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 27 ಸೀಟುಗಳನ್ನು ಗೆದ್ದಿತ್ತು. ಮೇಯರ್ ಪಟ್ಟದ ಬಹುಮತಕ್ಕೆ 4 ಸದಸ್ಯ ಬಲದ ಅಗತ್ಯವಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್-ಬಿಜೆಪಿ ಮೈತ್ರಿ: ಚುನಾವಣೆಯಲ್ಲಿ ಬಿಜೆಪಿ 16, ಕಾಂಗ್ರೆಸ್ 12 ಮತ್ತು ಅಜಿತ್ ಪವಾರ್ (ಎನ್‌ಸಿಪಿ) ಬಣದ ನಾಲ್ವರು ಸದಸ್ಯರು ಗೆದ್ದಿದ್ದರು. ಈ ಮೂರು ಪಕ್ಷಗಳು ಸೇರಿ ಅಂಬರ್ನಾಥ್ ವಿಕಾಸ್ ಅಘಾಡಿ ಹೆಸರಿನಲ್ಲಿ ಮೈತ್ರಿಕೂಟ ಮಾಡಿಕೊಂಡಿವೆ. ತೇಜಶ್ರೀ ಕರಂಜುಲೆ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಆದರೆ ರಾಜಕೀಯ ವಿರೋಧಿಗಳ ಈ ಮೈತ್ರಿಕೂಟ ಚರ್ಚೆಗೆ ಕಾರಣವಾಗಿದೆ. ಇದೆಂಥ ರಾಜಕೀಯ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಈ ಮೈತ್ರಿಕೂಟ ರಚನೆ ಕುರಿತು ಯಾವುದೇ ಔಪಚಾರಿಕ ಪ್ರಸ್ತಾವನೆ ರಾಜ್ಯದ ನಾಯಕರಿಗೆ ಬಂದಿಲ್ಲ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ಇದು ಸ್ಥಳೀಯ ಚುನಾವಣೆಗಳಾಗಿದ್ದು ಸ್ಥಳೀಯ ನಾಯಕರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಬಿಜೆಪಿ ಹೇಳಿದೆ. ಒಟ್ಟಿನಲ್ಲಿ ರಾಜಕೀಯ ವಿರೋಧಿಗಳು ಒಂದಾಗಿ ಮೇಯರ್ ಪಟ್ಟವನ್ನು ಪಡೆದುಕೊಂಡಿದ್ದಾರೆ.

ಏಕನಾಥ್ ಶಿಂಧೆ ಬಿಜೆಪಿ ನೇತೃತ್ವದ ಮಹಾಯತಿ ಮೈತ್ರಿಕೂಟದಲ್ಲಿ ಉಪಮುಖ್ಯಮಂತ್ರಿ. ಆದರೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ನಮಗೆ ದ್ರೋಹ ಮಾಡಿದೆ ಎಂದು ಏಕನಾಥ್ ಶಿಂಧೆ ಬಣದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಬಾಲಾಜಿ ಕಿನಿಕರ್ ಮಾತನಾಡಿ, “ಈ ಮೈತ್ರಿಕೂಟ ಅಪವಿತ್ರ ಮೈತ್ರಿ. ಬಿಜೆಪಿಯಿಂದ ನಮಗೆ ದ್ರೋಹವಾಗಿದೆ. ಬಿಜೆಪಿ ದೇಶಾದ್ಯಂತ ಕಾಂಗ್ರೆಸ್‌ ಮುಕ್ತದ ಬಗ್ಗೆ ಮಾತನಾಡುತ್ತಿದೆ. ಆದರೆ ಇಲ್ಲಿ ಕಾಂಗ್ರೆಸ್‌ ಜೊತೆ ಸೇರಿ ಆಡಳಿತ ನಡೆಸುತ್ತಿದೆ. ಇದು ಶಿವಸೇನೆಯ ಬೆನ್ನಿಗೆ ಚೂರಿ ಹಾಕುವ ಪ್ರಯತ್ನ” ಎಂದು ಟೀಕಿಸಿದ್ದಾರೆ.

ಬಿಜೆಪಿ ಉಪಾಧ್ಯಕ್ಷ ಗುಲಾಬ್ರಾವ್ ಕರಂಜುಲೆ ಪಾಟೀಲ್ ಈ ಬೆಳವಣಿಗೆ ಕುರಿತು ಮಾತನಾಡಿ, “ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಹಲವಾರು ಸುತ್ತಿನ ಪ್ರಯತ್ನಗಳನ್ನು ಮಾಡಿತ್ತು. ಆದರೆ ಆ ಪಕ್ಷದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ” ಎಂದು ಆರೋಪಿಸಿದ್ದಾರೆ.

“ಸ್ಥಳೀಯವಾಗಿ ಶಿವಸೇನೆ ಜೊತೆ ಮೈತ್ರಿ ನಿಜವಾಗಿಯೂ ಅಪವಿತ್ರವಾಗುತ್ತಿತ್ತು. ಕಳೆದ 25 ವರ್ಷಗಳಿಂದ ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ” ಎಂದು ದೂರಿದ್ದಾರೆ. ಪಕ್ಷದ ಬೇರೆ ಯಾವುದೇ ನಾಯಕರು ಈ ರಾಜಕೀಯದ ಕುರಿತು ಪ್ರತಿಕ್ರಿಯೆ ನೀಡಿಲ್ಲ.

ಮಹಾರಾಷ್ಟ್ರ ಕಾಂಗ್ರೆಸ್ ಅಂಬರ್ನಾಥ್ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ಸಂಪೂರ್ಣ ವಿಸರ್ಜನೆ ಮಾಡಿ ಎಂದು ಆದೇಶಿಸಿದೆ. ಇದು ಸಂಪೂರ್ಣವಾಗಿ ತಪ್ಪು ಹೆಜ್ಜೆ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ. ಈ ವಿಷಯವನ್ನು ಪರಿಗಣಿಸಿ, ಗೌರವಾನ್ವಿತ ರಾಜ್ಯ ಘಟಕದ ಅಧ್ಯಕ್ಷರಾದ ಹರ್ಷವರ್ಧನ್ ಸಪ್ಕಲ್ ಅವರ ಆದೇಶದಂತೆ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗುತ್ತಿದೆ. ಪಕ್ಷದ ಶಿಸ್ತು ಉಲ್ಲಂಘಿಸಿದ ಎಲ್ಲಾ ಕಾರ್ಪೊರೇಟರ್‌ಗಳನ್ನು ಸಹ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular