HomeKarnataka2 ಉಪ ಚುನಾವಣೆ, 4 ಸೀಟು ಪರಿಷತ್ ಚುನಾವಣೆ: ತಯಾರಿಯಲ್ಲಿ ಬ್ಯುಸಿಯಾದ ಬಿಜೆಪಿ!

2 ಉಪ ಚುನಾವಣೆ, 4 ಸೀಟು ಪರಿಷತ್ ಚುನಾವಣೆ: ತಯಾರಿಯಲ್ಲಿ ಬ್ಯುಸಿಯಾದ ಬಿಜೆಪಿ!

2026ರ ಪ್ರಾರಂಭದಲ್ಲಿಯೇ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ನಾಯಕರು ಫುಲ್ ಬ್ಯುಸಿಯಾಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆಗಳ ಜೊತೆಗೆ 2 ಕ್ಷೇತ್ರದ ಉಪ ಚುನಾವಣೆ ಮತ್ತು 4 ಸೀಟುಗಳ ವಿಧಾನ ಪರಿಷತ್ ಚುನಾವಣೆಗೆ ತಯಾರಿ ಜೋರಾಗಿದೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕೋರ್‌ ಕಮಿಟಿ ಸಭೆಯನ್ನು ನಡೆಸಿ ಚುನಾವಣೆಗಳ ಕುರಿತು ಚರ್ಚೆ ನಡೆಸಲಾಗಿದೆ. ಆಡಳಿತ ಪಕ್ಷ ಕಾಂಗ್ರೆಸ್ ಚುನಾವಣೆಯನ್ನು ಗೆದ್ದು ಸರ್ಕಾರದ ಪ್ರತಿಷ್ಠೆ ಉಳಿಸಿಕೊಳ್ಳುವ ಉತ್ಸಾಹದಲ್ಲಿದ್ದರೆ, ಬಿಜೆಪಿ ಗೆದ್ದು ಆಡಳಿತ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಲು ತಂತ್ರ ರೂಪಿಸಲಾಗುತ್ತಿದೆ.

ಯಾವ-ಯಾವ ಚುನಾವಣೆ: ಬಾಗಲಕೋಟೆ ಕ್ಷೇತ್ರದ ಹಾಲಿ ಶಾಸಕ ಹೆಚ್.ವೈ ಮೇಟಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ಉಪ ಚುನಾವಣೆ ಎದುರಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 2023ರಲ್ಲಿ ಗೆದ್ದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದ್ದರಿಂದ ಕ್ಷೇತ್ರ ಉಳಿಸಿಕೊಳ್ಳುವ ಅನಿವಾರ್ಯತೆ ಆಡಳಿತ ಪಕ್ಷಕ್ಕಿದೆ. ಆದರೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಿಜೆಪಿ ತಯಾರಿ ಆರಂಭಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಗೆದ್ದಿಲ್ಲ.

ಬಿಜೆಪಿ-ಜೆಡಿಎಸ್ ಮೈತ್ರಿಯ ಕುರಿತು ಚರ್ಚೆಗಳು ನಡೆಯುತ್ತಿವೆ. ಉಪ ಚುನಾವಣೆಯಲ್ಲಿ ಮೈತ್ರಿ ಮುಂದುವರೆಯಲಿದೆಯೇ? ಅಥವ ಜೆಡಿಎಸ್ ಸಹ ಎದುರಾಳಿಯಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕ ಬಿಜೆಪಿ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂದು ಚರ್ಚೆಗಳು ಆಗುತ್ತಿವೆ. ಇಂತಹ ಹೊತ್ತಿನಲ್ಲಿಯೇ ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ವರಿಷ್ಠರಿಗೆ ಸಂದೇಶವನ್ನು ತಲುಪಿಸಲು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂದಾಗಿದ್ದಾರೆ.

ಬಾಗಲಕೋಟೆ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಹೆಚ್.ವೈ ಮೇಟಿ 79,336 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚಿರಂತಿಮಠ 73,458 ಮತಗಳನ್ನು ಪಡೆದು ಸೋಲು ಕಂಡಿದ್ದರು. ಉಪಚುನಾವಣೆಯಲ್ಲಿ ಕ್ಷೇತ್ರವನ್ನು ಗೆದ್ದು ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಬಿಜೆಪಿ ತಯಾರಾಗಿದೆ.

ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ 84,298 ಮತಗಳನ್ನು ಪಡೆದು ಗೆದ್ದಿದ್ದರು. ಬಿಜೆಪಿಯ ಅಜಯ್ ಕುಮಾರ್ ಬಿ.ಜಿ. 56,410 ಮತಗಳನ್ನು ಪಡೆದು ಸೋಲು ಕಂಡಿದ್ದರು.

2008ರ ಬಳಿಕ ನಡೆದ 4 ಚುನಾವಣೆಯಲ್ಲಿಯೂ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದರು. ಆದ್ದರಿಂದ ಅವರ ಅನುಪಸ್ಥಿತಿಯಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಿಜೆಪಿ ತಂತ್ರವನ್ನು ರೂಪಿಸುತ್ತಿದೆ.

ಪರಿಷತ್ ಚುನಾವಣೆ: ವಿಧಾನ ಪರಿಷತ್‌ನ 4 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಆಡಳಿತ ಪಕ್ಷ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಮೂಲಕ ಚುನಾವಣೆ ತಯಾರಿಯನ್ನು ಆರಂಭಿಸಿದೆ.

ಪಶ್ಚಿಮ ಪದವೀಧರ, ಆಗ್ನೇಯ ಪದವೀಧರ, ಈಶಾನ್ಯ ಶಿಕ್ಷಕ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಬೇಕಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆದರೆ ಎರಡು ಪಕ್ಷಗಳು 2 ಸೀಟುಗಳನ್ನು ಹಂಚಿಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ.

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ನಾಯಕರಲ್ಲಿಯೂ ತಯಾರಿ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಟಿಕೆಟ್ ಕುರಿತು ಲೆಕ್ಕಾಚಾರಗಳು ಪ್ರಾರಂಭವಾಗಿವೆ.

 ಪಕ್ಷದಲ್ಲಿ ಟಿಕೆಟ್‌ಗಾಗಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲು ಇನ್ನೊಮ್ಮೆ ಕೋರ್ ಕಮಿಟಿ ಸಭೆ ನಡೆಯಲಿದೆ.

ಈ ಚುನಾವಣೆಗಳ ಬಳಿಕ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ), ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ. ಜಿಬಿಎ ಚುನಾವಣೆಯಲ್ಲಿ ಗೆದ್ದು ಬೆಂಗಳೂರು ನಗರದ ಅಧಿಕಾರ ಹಿಡಿಯಬೇಕು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular