ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ಹೊಸ ಮಾರ್ಗದಲ್ಲಿ ನಾನ್ ಎಸಿ ಬಸ್ಗಳ ಸಂಚಾರವನ್ನು ಘೋಷಣೆ ಮಾಡಿದೆ. ಕಲಬುರಗಿ ವಿಭಾಗ-1ರ ಕಲಬುರಗಿ ಘಟಕ-1ರಿಂದ ಈ ಬಸ್ಗಳು ಸಂಚಾರವನ್ನು ನಡೆಸಲಿವೆ.
ಕಲಬುರಗಿ-ಮೈಸೂರು (ಅಮೋಘವರ್ಷ) ಮತ್ತು ಕಲಬುರಗಿ-ಚಿತ್ರದುರ್ಗ ನಾನ್ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1 ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಬಸ್ ವೇಳಾಪಟ್ಟಿ: ಕಲಬುರಗಿ-ಮೈಸೂರು ಬಸ್ ಕಲಬುರಗಿ ಬಸ್ ನಿಲ್ದಾಣದಿಂದ ಸಂಜೆ 5 ಗಂಟೆಗೆ ನಿರ್ಗಮಿಸಿ ವಯಾ ಜೇವರ್ಗಿ, ಶಹಾಪೂರ, ಲಿಂಗಸೂರು, ಸಿಂಧನೂರು, ಬಳ್ಳಾರಿ, ಚಳ್ಳಕೆರೆ, ಹಿರಿಯೂರು, ನಾಗಮಂಗಲ ಮತ್ತು ಪಾಂಡವಪುರ ಮಾರ್ಗದ ಮೂಲಕ ಬೆಳಗ್ಗೆ 7 ಗಂಟೆಗೆ ಮೈಸೂರು ತಲುಪುತ್ತದೆ. ಪುನಃ ಮೈಸೂರು ಬಸ್ ನಿಲ್ದಾಣದಿಂದ ಸಂಜೆ 5.30ಗಂಟೆಗೆ ನಿರ್ಗಮಿಸಿ ಬೆಳಗ್ಗೆ 7.30 ಗಂಟೆಗೆ ಕಲಬುರಗಿಗೆ ತಲುಪುತ್ತದೆ.
ಕಲಬುರಗಿ-ಚಿತ್ರದುರ್ಗ ಮಾರ್ಗದ ಬಸ್ ಕಲಬುರಗಿ ಬಸ್ ನಿಲ್ದಾಣದಿಂದ ರಾತ್ರಿ 10.45 ಗಂಟೆಗೆ ನಿರ್ಗಮಿಸಿ ವಯಾ ಜೇವರ್ಗಿ, ಶಹಾಪೂರ, ಲಿಂಗಸೂರು, ಸಿಂಧನೂರು, ಗಂಗಾವತಿ ಮತ್ತು ಹೊಸಪೇಟೆ ಮಾರ್ಗದ ಮೂಲಕ ಬೆಳಗ್ಗೆ 08 ಗಂಟೆಗೆ ಚಿತ್ರದುರ್ಗ ತಲುಪುತ್ತದೆ. ಪುನಃ ಚಿತ್ರದುರ್ಗ ಬಸ್ ನಿಲ್ದಾಣದಿಂದ ರಾತ್ರಿ 7.40 ಗಂಟೆಗೆ ನಿರ್ಗಮಿಸಿ ಬೆಳಗ್ಗೆ 5.20 ಗಂಟೆಗೆ ಕಲಬುರಗಿಗೆ ತಲುಪುತ್ತದೆ.
ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಶೀಘ್ರವೇ ಹೊಸ ಬಸ್ ಸೇರ್ಪಡೆ: ಶೀಘ್ರವೇ ಕಲ್ಯಾಣ ಕರ್ನಾಟಕಕ್ಕೆ ಆಧುನಿಕ ಬಸ್ ಸೇವೆ ಆರಂಭವಾಗಲಿದೆ. ಬೆಂಗಳೂರುನಲ್ಲಿರುವ M/s. Praksh Body Builders ಸಂಸ್ಥೆಯ ಬಸ್ ಬಾಡಿ ಬಿಲ್ಡಿಂಗ್ ಘಟಕಕ್ಕೆ ಭೇಟಿ ನೀಡಿ, ಸಾರ್ವಜನಿಕ ಸೇವೆಗೆ ಶೀಘ್ರದಲ್ಲೇ ಸೇರ್ಪಡೆಯಾಗಲಿರುವ ಒಟ್ಟು 56 ನೂತನ AC ಮತ್ತು Non-AC ಸ್ಲೀಪರ್ ಹಾಗೂ ಸೆಮಿ ಸ್ಲೀಪರ್ ಬಸ್ಗಳ ನಿರ್ಮಾಣ ಪ್ರಗತಿಯನ್ನು ಕೆಕೆಆರ್ಟಿಸಿಯ ಅಧ್ಯಕ್ಷರು ಪರಿಶೀಲಿಸಿದ್ದಾರೆ.
ಬಸ್ಗಳ ಗುಣಮಟ್ಟ, ಪ್ರಯಾಣಿಕರ ಆರಾಮ, ಆಧುನಿಕ ಸೌಲಭ್ಯಗಳು ಹಾಗೂ ಸುರಕ್ಷತಾ ಮಾನದಂಡಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ನಿಗದಿತ ಅವಧಿಯೊಳಗೆ ಉನ್ನತ ಗುಣಮಟ್ಟದಲ್ಲಿ ಕಾರ್ಯ ಪೂರ್ಣಗೊಳಿಸುವಂತೆ ಸಂಸ್ಥೆಯ ಮಾಲೀಕರಿಗೂ ಅಧಿಕಾರಿಗಳಿಗೂ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ.

