ಬೆಂಗಳೂರು: ಇಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಚರ್ಚೆ ಶುರುವಾದ್ರೆ ಸಾಕು, ಮೊದಲು ಬರೋ ವಿಷಯವೇ ತೂಕ (Weight). ಲೋಕದಲ್ಲಿ ಅರ್ಧಕ್ಕರ್ಧ ಜನ ತೂಕ ಇಳಿಸಿಕೊಳ್ಳಲು ಬೆವರುತ್ತಿದ್ದರೆ, ಇನ್ನರ್ಧ ಜನ ಗಿಡದ ಕಡ್ಡಿಯಂತಿರೋ ತಮ್ಮ ದೇಹವನ್ನು ನೋಡಿ ತೂಕ ಹೆಚ್ಚಿಸಿಕೊಳ್ಳೋದು ಹೇಗೆ? ಅಂತ ಚಿಂತೆ ಮಾಡ್ತಿದ್ದಾರೆ. ವಿಶೇಷವಾಗಿ ಯುವ ವಯಸ್ಸಿನಲ್ಲಿ ತೂಕ ಕಡಿಮೆ ಇದ್ದರೆ ಸುಸ್ತು, ದೌರ್ಬಲ್ಯ ಮಾತ್ರವಲ್ಲದೆ ಆತ್ಮವಿಶ್ವಾಸದ ಕೊರತೆಯೂ ಕಾಡೋದು ಸುಳ್ಳಲ್ಲ.
ತೂಕ ಹೆಚ್ಚಿಸಿಕೊಳ್ಳಬೇಕು ಅಂದ ತಕ್ಷಣ ಸಿಕ್ಕಸಿಕ್ಕ ಜಂಕ್ ಫುಡ್, ಎಣ್ಣೆ ತಿಂಡಿ ತಿನ್ನುವುದು ತಪ್ಪು. ಇದು ತೂಕವನ್ನೇನೋ ಹೆಚ್ಚಿಸಬಹುದು, ಆದರೆ ಅದರ ಜೊತೆಗೆ ಬೇಡದ ಕಾಯಿಲೆಗಳನ್ನೂ ತರುತ್ತದೆ. ತೂಕ ಇಳಿಸುವುದು ಎಷ್ಟು ಕಷ್ಟವೋ, ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ಶ್ರಮದಾಯಕ ಕೆಲಸ. ಇದಕ್ಕೆ ಬೇಕಾಗಿರುವುದು ಹೈ-ಪ್ರೋಟೀನ್ ಮತ್ತು ಸರಿಯಾದ ಪ್ರಮಾಣದ ಕ್ಯಾಲೋರಿಗಳ ಪೌಷ್ಟಿಕ ಆಹಾರ.
ಪರಿಹಾರ ಎಲ್ಲಿದೆ? ನಿಮ್ಮ ಮನೆಯಲ್ಲೇ ಇದೆ
ಹಲವು ಪ್ರೋಟೀನ್ ಪೌಡರ್‌ಗಳ ಹಿಂದೆ ಬಿದ್ದು ದುಡ್ಡು ಕಳೆದುಕೊಳ್ಳುವ ಬದಲು, ಪ್ರಕೃತಿ ನೀಡಿರುವ ಪೋಷಕಾಂಶಗಳ ಮೊರೆ ಹೋಗುವುದು ಬೆಸ್ಟ್. ಡ್ರೈ ಫ್ರೂಟ್ಸ್, ಹಾಲು ಮತ್ತು ಹಣ್ಣುಗಳ ಸರಿಯಾದ ಸಮ್ಮಿಶ್ರಣ ನಿಮ್ಮ ದೇಹಕ್ಕೆ ಬೇಕಾದ ಅಸಲಿ ಶಕ್ತಿಯನ್ನು ನೀಡುತ್ತದೆ.ನಿಮಗೆ ಗೊತ್ತಾ? ಕೇವಲ ಹತ್ತೇ ನಿಮಿಷದಲ್ಲಿ ನೀವೊಂದು ಅದ್ಭುತ ಹೆಲ್ತ್ ಡ್ರಿಂಕ್ ಸಿದ್ಧಪಡಿಸಬಹುದು. ಇದು ನಿಮ್ಮ ಸ್ನಾಯುಗಳ ಬೆಳವಣಿಗೆಗೆ (Muscle Building) ಮತ್ತು ಶಕ್ತಿ ಹೆಚ್ಚಿಸಲು ರಾಮಬಾಣ.ಕೇವಲ 5 ರಿಂದ 10 ನಿಮಿಷದಲ್ಲಿ ತಯಾರಿಸಬಹುದಾದ ಈ ಮ್ಯಾಜಿಕಲ್ ಡ್ರಿಂಕ್ ರೆಸಿಪಿ ಇಲ್ಲಿದೆ ನೋಡಿ:
ಬೇಕಾಗುವ ಪದಾರ್ಥಗಳು:
ಹಾಲು: 1 ದೊಡ್ಡ ಲೋಟ
ಖರ್ಜೂರ: 3 ರಿಂದ 4 (ಬೀಜ ತೆಗೆದದ್ದು ).
ಬಾದಾಮಿ & ಗೋಡಂಬಿ: ತಲಾ 5 (ನೆನೆಸಿ ಸಿಪ್ಪೆ ತೆಗೆದರೆ ಉತ್ತಮ).
ದ್ರಾಕ್ಷಿ: ಒಂದು ಸಣ್ಣ ಹಿಡಿ.
ಹಣ್ಣುಗಳು: ಒಂದು ಬಾಳೆಹಣ್ಣು ಅಥವಾ ಸಪೋಟ (ಇವು ತೂಕ ಹೆಚ್ಚಿಸಲು ಬೆಸ್ಟ್).
ತಯಾರಿಸುವ ಸರಳ ವಿಧಾನ:
ಮೊದಲು ಬಾದಾಮಿ, ಗೋಡಂಬಿ ಮತ್ತು ಖರ್ಜೂರವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ ಅಥವಾ ಸ್ವಲ್ಪ ಹಾಲಿನಲ್ಲಿ 10 ನಿಮಿಷ ನೆನೆಸಿಡಿ.
ಒಂದು ಮಿಕ್ಸಿ ಜಾರ್‌ಗೆ ಕತ್ತರಿಸಿದ ಬಾಳೆಹಣ್ಣು, ನೆನೆಸಿದ ಡ್ರೈ ಫ್ರೂಟ್ಸ್ ಮತ್ತು ದ್ರಾಕ್ಷಿಯನ್ನು ಹಾಕಿ.
ಈಗ ಇದಕ್ಕೆ ತಣ್ಣಗಿನ ಅಥವಾ ಉಗುರು ಬೆಚ್ಚಗಿನ ಹಾಲನ್ನು ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ.
ಗ್ಲಾಸ್‌ಗೆ ಸುರಿದುಕೊಂಡು ಮೇಲೆ ಸ್ವಲ್ಪ ದ್ರಾಕ್ಷಿ ಅಥವಾ ಗೋಡಂಬಿ ಚೂರುಗಳನ್ನು ಹಾಕಿದರೆ ನಿಮ್ಮ ‘ವೇಯ್ಟ್ ಗೇನ್ ಶೇಕ್’ ಸಿದ್ಧ

