ಹುಬ್ಬಳ್ಳಿ: ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುವ ಭಕ್ತರು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ-ಶಿರಡಿ ನಡುವೆ ಪ್ರತಿದಿನ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭಿಸಲಾಗಿದೆ. ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ಸೇವೆ ಆರಂಭಿಸಿದ್ದು, ಎರಡು ಹೊಸ ಬಸ್‌ಗಳು ಸಂಚರಿಸಲಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಶಿರಡಿಗೆ ಪ್ರತಿದಿನ ಕರ್ನಾಟಕದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ಇದರ ಜತೆಗೆ ಪುಣೆ, ಪಿಂಪ್ರಿ, ಅಹ್ಮದನಗರ, ನಾಸಿಕ್, ಔರಂಗಾಬಾದ್ ಸೇರಿದಂತೆ ಮಹಾರಾಷ್ಟ್ರದ ವಿವಿಧ ನಗರಗಳಿಗೆ ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ ಮತ್ತು ಪ್ರವಾಸದ ಉದ್ದೇಶದಿಂದಲೂ ಜನರು ಪ್ರಯಾಣಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಧಾರವಾಡ, ಬೆಳಗಾವಿ, ಕೊಲ್ಹಾಪುರ, ಪುಣೆ, ಪಿಂಪ್ರಿ ಹಾಗೂ ಅಹ್ಮದನಗರ ಮಾರ್ಗವಾಗಿ ಹುಬ್ಬಳ್ಳಿ-ಶಿರಡಿ ನಡುವೆ ಎರಡು ರಾಜರಥ ಎಸಿ ಸ್ಲೀಪರ್ ಬಸ್‌ಗಳನ್ನು ಆರಂಭಿಸಲಾಗಿದೆ. ಪ್ರತಿದಿನ ಒಂದು ಬಸ್ ಹುಬ್ಬಳ್ಳಿಯಿಂದ ಶಿರಡಿಗೆ ಹಾಗೂ ಮತ್ತೊಂದು ಬಸ್ ಶಿರಡಿಯಿಂದ ಹುಬ್ಬಳ್ಳಿಗೆ ಸಂಚರಿಸಲಿದೆ.
ಹುಬ್ಬಳ್ಳಿಯಿಂದ ಶಿರಡಿಗೆ ಬಸ್ ಸಮಯ
ಹುಬ್ಬಳ್ಳಿಯಿಂದ ಶಿರಡಿಗೆ ತೆರಳುವ ಬಸ್ ಪ್ರತಿದಿನ ರಾತ್ರಿ 8 ಗಂಟೆಗೆ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಡಲಿದೆ. ನಂತರ ರಾತ್ರಿ 8.15ಕ್ಕೆ ಹೊಸೂರು ಬಸ್ ನಿಲ್ದಾಣ, 9 ಗಂಟೆಗೆ ಧಾರವಾಡ ಹೊಸ ಬಸ್ ನಿಲ್ದಾಣ ಹಾಗೂ 10.15ಕ್ಕೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಪ್ರಯಾಣ ಮುಂದುವರಿಸಲಿದೆ.
ಈ ಬಸ್ ಮರುದಿನ ಬೆಳಗ್ಗೆ 5 ಗಂಟೆಗೆ ಪುಣೆ ಸ್ವಾರ್ಗೇಟ್ ಬಸ್ ನಿಲ್ದಾಣ, 8 ಗಂಟೆಗೆ ಅಹ್ಮದನಗರ ಹಾಗೂ ಬೆಳಗ್ಗೆ 9.30ಕ್ಕೆ ಶಿರಡಿ ತಲುಪಲಿದೆ.
ಶಿರಡಿಯಿಂದ ಹುಬ್ಬಳ್ಳಿಗೆ ಬಸ್ ಸಮಯ
ಶಿರಡಿಯಿಂದ ಹುಬ್ಬಳ್ಳಿಗೆ ಬರುವ ಬಸ್ ಸಂಜೆ 6.35ಕ್ಕೆ ಶಿರಡಿ ಬಸ್ ನಿಲ್ದಾಣದಿಂದ ಹೊರಡಲಿದೆ. ರಾತ್ರಿ 8.35ಕ್ಕೆ ಅಹ್ಮದನಗರದ ತಾರಕಪುರ ಬಸ್ ನಿಲ್ದಾಣ ಹಾಗೂ ರಾತ್ರಿ 11.20ಕ್ಕೆ ಪುಣೆ ಸ್ವಾರ್ಗೇಟ್ ಬಸ್ ನಿಲ್ದಾಣದಿಂದ ಹೊರಡಲಿದೆ.ಮರುದಿನ ಬೆಳಗ್ಗೆ 5.05ಕ್ಕೆ ಬೆಳಗಾವಿ, 6.20ಕ್ಕೆ ಧಾರವಾಡ ಹಾಗೂ ಬೆಳಗ್ಗೆ 7 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.
ಪ್ರಯಾಣ ದರ ಎಷ್ಟು?
ಅಪಘಾತ ಪರಿಹಾರ ವಿಮೆ, ಟೋಲ್ ಶುಲ್ಕ ಸೇರಿದಂತೆ ಹುಬ್ಬಳ್ಳಿಯಿಂದ ಪುಣೆಗೆ ಒಟ್ಟು ಪ್ರಯಾಣ ದರ ₹1,223 ಹಾಗೂ ಹುಬ್ಬಳ್ಳಿಯಿಂದ ಶಿರಡಿಗೆ ₹1,822 ನಿಗದಿಪಡಿಸಲಾಗಿದೆ.
ಮುಂಗಡ ಟಿಕೆಟ್ ಬುಕ್ಕಿಂಗ್
ಪ್ರಯಾಣಿಕರು www.ksrtc.in ವೆಬ್‌ಸೈಟ್, ಕೆಎಸ್‌ಆರ್‌ಟಿಸಿ ಮೊಬೈಲ್ ಆ್ಯಪ್ ಹಾಗೂ ವಾಟ್ಸ್‌ಆ್ಯಪ್ ಸಂಖ್ಯೆ 6364940880 ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು.
ಇದರ ಜತೆಗೆ ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿಯೂ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯವಿದೆ.
ಪ್ರಯಾಣಿಕರಿಗೆ ರಿಯಾಯಿತಿ
ಒಂದೇ ಟಿಕೆಟ್‌ನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಆಸನಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇ.5ರಷ್ಟು ರಿಯಾಯಿತಿ ಸಿಗಲಿದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಖರೀದಿಸಿದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಹೊಸ ಬಸ್ ಸೇವೆಯಿಂದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಪ್ರಯಾಣಿಕರಿಗೆ ಮಾತ್ರವಲ್ಲದೆ, ಮಹಾರಾಷ್ಟ್ರದ ಪುಣೆ, ಶಿರಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ಇತರ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ಈ ಸೇವೆಗೆ ಸಾರ್ವಜನಿಕರಿಂದ ಸಿಗುವ ಪ್ರತಿಕ್ರಿಯೆಯನ್ನು ಗಮನಿಸಿ, ನೆರೆಯ ರಾಜ್ಯಗಳ ಇತರೆ ಪ್ರಮುಖ ನಗರಗಳು ಮತ್ತು ಸ್ಥಳಗಳಿಗೆ ಹುಬ್ಬಳ್ಳಿಯಿಂದ ನೇರ ಬಸ್ ಸೇವೆ ಆರಂಭಿಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.

