ನೀವು ಎಂದಾದರೂ ಹೋಟೆಲ್ ರೂಮ್‌ಗಳಿಗೆ ಹೋದಾಗ ಗಮನಿಸಿದ್ದೀರಾ? ಅಲ್ಲಿ ಸುಸಜ್ಜಿತ ಮಂಚ, ಟಿವಿ, ಎಸಿ ಎಲ್ಲವೂ ಇರುತ್ತದೆ. ಆದರೆ ಸಮಯ ತೋರಿಸುವ ಗಡಿಯಾರ ಮಾತ್ರ ಎಲ್ಲಿಯೂ ಕಾಣಿಸುವುದಿಲ್ಲ. ಅರೆ, ಇದೇನಪ್ಪಾ ಇಷ್ಟು ದೊಡ್ಡ ಹೋಟೆಲ್‌ನಲ್ಲಿ ಒಂದು ಗಡಿಯಾರ ಇಟ್ಟಿಲ್ಲವಲ್ಲ ಎಂದು ನೀವು ಅಂದುಕೊಂಡಿರಬಹುದು. ಆದರೆ ಇದು ಹೋಟೆಲ್ ಮಾಲೀಕರ ಮರೆವು ಅಥವಾ ಹಣ ಉಳಿಸುವ ತಂತ್ರವಲ್ಲ. ಇದರ ಹಿಂದೆ ಕೆಲವು ಆಸಕ್ತಿದಾಯಕ ಮತ್ತು ವೈಜ್ಞಾನಿಕ ಕಾರಣಗಳಿವೆ.
ನಿಮಗೆ ಒತ್ತಡ ಮುಕ್ತ ಅನುಭವ ನೀಡಲು ಹೋಟೆಲ್‌ಗೆ ಹೋಗುವುದೇ ವಿಶ್ರಾಂತಿ ಪಡೆಯಲು. ಮನೆಯಲ್ಲಿದ್ದಾಗ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಗಡಿಯಾರದ ಮುಳ್ಳಿನಂತೆ ನಾವು ಓಡುತ್ತಿರುತ್ತೇವೆ. ಮೀಟಿಂಗ್, ಕೆಲಸದ ಡೆಡ್‌ಲೈನ್ ಇವೆಲ್ಲವೂ ಗಡಿಯಾರ ನೋಡಿದಾಗ ನೆನಪಿಗೆ ಬರುತ್ತವೆ. ಹೋಟೆಲ್ ರೂಮ್‌ನಲ್ಲಿ ಗಡಿಯಾರ ಇಲ್ಲದಿದ್ದರೆ, ನೀವು ಸಮಯದ ಅರಿವಿಲ್ಲದೆ ಹಾಯಾಗಿ ಇರಬಹುದು. ಸಮಯದ ಒತ್ತಡವಿಲ್ಲದಿದ್ದರೆ ಮೆದುಳು ಬೇಗನೆ ರಿಲ್ಯಾಕ್ಸ್ ಆಗುತ್ತದೆ ಎಂಬುದು ಮನಶ್ಶಾಸ್ತ್ರಜ್ಞರ ಅಭಿಮತ.
ಗಂಟೆ ನೋಡಿ ನಿದ್ದೆ ಗೆಡಬಾರದು ಎಂಬ ಕಾಳಜಿ ಅನೇಕರಿಗೆ ನಡುರಾತ್ರಿಯಲ್ಲಿ ನಿದ್ದೆ ಬಾರದೆ ಒದ್ದಾಡುವ ಅಭ್ಯಾಸವಿರುತ್ತದೆ. ಅಂತಹ ಸಮಯದಲ್ಲಿ ಗಡಿಯಾರ ನೋಡಿದಾಗ “ಅಯ್ಯೋ, ಆಗಲೇ ಸಮಯ 3 ಗಂಟೆ ಆಯ್ತು, ನನಗೆ ಇನ್ನು ನಿದ್ದೆ ಬಂದಿಲ್ಲವಲ್ಲ” ಎಂಬ ಆತಂಕ ಶುರುವಾಗುತ್ತದೆ. ಈ ಆತಂಕದಿಂದ ನಿದ್ದೆ ಇನ್ನಷ್ಟು ದೂರವಾಗುತ್ತದೆ. ರೂಮ್‌ನಲ್ಲಿ ಗಡಿಯಾರ ಇಲ್ಲದಿದ್ದರೆ ನೀವು ಎಷ್ಟೊತ್ತಿಗೆ ನಿದ್ದೆ ಮಾಡಿದಿರಿ ಅಥವಾ ಎಷ್ಟು ಗಂಟೆಗೆ ಎಚ್ಚರವಾಯಿತು ಎಂಬ ಚಿಂತೆ ಇರುವುದಿಲ್ಲ. ಇದರಿಂದ ಗಾಢವಾದ ನಿದ್ದೆ ಪಡೆಯಲು ಸಾಧ್ಯವಾಗುತ್ತದೆ.
ಮೊಬೈಲ್ ಯುಗದ ಪ್ರಭಾವ ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ಸಮಯ ನೋಡಲು, ಅಲಾರಾಂ ಇಡಲು ಎಲ್ಲರೂ ಮೊಬೈಲ್ ಅಥವಾ ಸ್ಮಾರ್ಟ್ ವಾಚ್‌ಗಳನ್ನೇ ಅವಲಂಬಿಸಿದ್ದಾರೆ. ಹೀಗಿರುವಾಗ ಹೋಟೆಲ್ ಕೊಠಡಿಗಳಲ್ಲಿ ಪ್ರತ್ಯೇಕವಾಗಿ ಗಡಿಯಾರ ಇಡುವುದು ಅನಗತ್ಯ ಎಂದು ಹೋಟೆಲ್ ಉದ್ಯಮ ಭಾವಿಸಿದೆ. ಅಲ್ಲದೆ, ಹಳೆಯ ಡಿಜಿಟಲ್ ಗಡಿಯಾರಗಳು ಪದೇ ಪದೇ ತಪ್ಪು ಸಮಯ ತೋರಿಸುವುದು ಅಥವಾ ಲೈಟ್ ಮಿನುಗುವುದರಿಂದ ಗ್ರಾಹಕರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಈ ಎಲ್ಲಾ ತಲೆನೋವು ಬೇಡವೆಂದೇ ಹೋಟೆಲ್‌ಗಳು ಗಡಿಯಾರಗಳಿಗೆ ಕೊಕ್ ನೀಡಿವೆ.
ಹೆಚ್ಚು ಸಮಯ ಕಳೆಯಲು ಪ್ರೇರಣೆ ಸಮಯದ ಅರಿವಿಲ್ಲದಿದ್ದರೆ ಜನರು ಹೋಟೆಲ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ನಿಧಾನವಾಗಿ ಉಪಹಾರ ಸೇವಿಸುವುದು, ಈಜುಕೊಳದಲ್ಲಿ ಆಟವಾಡುವುದು ಅಥವಾ ಲಾಬಿಯಲ್ಲಿ ಕುಳಿತು ಹರಟೆ ಹೊಡೆಯುವುದು ಹೆಚ್ಚಾಗುತ್ತದೆ. ಇದರಿಂದ ಗ್ರಾಹಕರಿಗೆ ಆ ಜಾಗದ ಮೇಲೆ ಒಲವು ಹೆಚ್ಚಾಗಿ, ಅವರು ಹೋಟೆಲ್‌ನ ಇತರ ಸೇವೆಗಳನ್ನು ಬಳಸಿಕೊಳ್ಳಲು ಮನಸ್ಸು ಮಾಡುತ್ತಾರೆ.
ಒಟ್ಟಿನಲ್ಲಿ, ನೀವು ಹೋಟೆಲ್ ರೂಮ್‌ಗೆ ಹೋದಾಗ ಸಮಯವನ್ನು ಮರೆತು, ಪ್ರಪಂಚದ ಜಂಜಾಟದಿಂದ ದೂರವಾಗಿ ಸುಂದರ ಕ್ಷಣಗಳನ್ನು ಕಳೆಯಲಿ ಎಂಬುದು ಹೋಟೆಲ್ ಸಂಸ್ಥೆಗಳ ಉದ್ದೇಶವಾಗಿರುತ್ತದೆ.

