ಬೆಂಗಳೂರು : ಬೆಂಗಳೂರು & ಕರಾವಳಿ ಜಿಲ್ಲೆಗಳ ನಡುವೆ ‘ವಂದೇ ಭಾರತ್’ ರೈಲು ಸೇವೆ ಒದಗಿಸುವಂತೆ ಕೇಂದ್ರ ರೈಲ್ವೇ ಸಚಿವರಿಗೆ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.
”ಕರಾವಳಿ ಮತ್ತು ಬೆಂಗಳೂರು ನಡುವಿನ ಸಂಪರ್ಕಕ್ಕೆ ಹೊಸ ವೇಗ ನೀಡಲು ವಂದೇ ಭಾರತ್ (Vande Bharat) ರೈಲು ಸೇವೆ ಒದಗಿಸುವಂತೆ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಅಶ್ವೀನ್ ವೈಷ್ಣವ್ ಅವರಿಗೆ ಮಂಗಳೂರು ಜನತೆಯ ಪರವಾಗಿ ಮನವಿ ಮಾಡಿ ಪತ್ರ ಬರೆದಿದ್ದೇನೆ. ಮಂಗಳೂರು ಮತ್ತು ಬೆಂಗಳೂರು ಕರ್ನಾಟಕದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳು. ಮಂಗಳೂರನ್ನು ಬೆಂಗಳೂರಿಗೆ ಪರ್ಯಾಯವಾದ ಅತ್ಯಾಧುನಿಕ ಉದ್ಯೋಗ ಮತ್ತು ಕೈಗಾರಿಕಾ ತಾಣವನ್ನಾಗಿ ರೂಪಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ”.
”ಆದರೆ, ಈ ಎರಡು ನಗರಗಳ ನಡುವಿನ ವೇಗದ ಸಾರಿಗೆ ಸಂಪರ್ಕದ ಕೊರತೆಯು ಈ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗಿದೆ. ಪ್ರಸ್ತುತ ಸಾವಿರಾರು ಉದ್ಯಮಿಗಳು ಮತ್ತು ವೃತ್ತಿಪರರು ಕೇವಲ ಕೆಲವೇ ಗಂಟೆಗಳ ಕೆಲಸಕ್ಕಾಗಿ ರಾತ್ರಿ ಪೂರ್ತಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ಇದು ನಮ್ಮ ಶ್ರಮಜೀವಿ ಜನರಿಗೆ ಆಗುತ್ತಿರುವ ಅನ್ಯಾಯ. ಈ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಜನಸಾಮಾನ್ಯರ ಅನುಕೂಲಕ್ಕಾಗಿ ಈ ಕೆಳಗಿನಂತೆ ವಂದೇ ಭಾರತ್ (Vande Bharat) ರೈಲುಗಳನ್ನು ಆರಂಭಿಸಲು ಕೋರಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ (Shri Ashwini Vaishnaw) ಅವರಿಗೆ ಪತ್ರ ಬರೆದು ಅದರಂತೆ”,
”ಬೆಳಗ್ಗೆ 4:00 ಗಂಟೆಗೆ * ಬೆಳಗ್ಗೆ 10:00 ಗಂಟೆಗೆ * ಸಂಜೆ 6:00 ಗಂಟೆಗೆ ಮಂಗಳೂರಿನಿಂದ ಬೆಂಗಳೂರಿಗೆ ಪ್ರತಿದಿನ 03 ವಂದೇ ಭಾರತ್ (Vande Bharat) ರೈಲುಗಳ ಸೇವೆ ಒದಗಿಸುವಂತೆ ಉಲ್ಲೇಖಿಸಿದ್ದೇನೆ. ಈ ರೈಲು ಸಂಪರ್ಕವು ಕೇವಲ ಪ್ರಯಾಣವನ್ನಷ್ಟೇ ಅಲ್ಲದೆ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೂ ದೊಡ್ಡ ಚೈತನ್ಯ ನೀಡಲಿದೆ. ಕರಾವಳಿ ಜನರ ಈ ನ್ಯಾಯಯುತ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಸ ಇರಿಸಿದ್ದೇನೆ” ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

