ಹೊಸಪೇಟೆ(ವಿಜಯನಗರ ಜಿಲ್ಲೆ): ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಮೂವರಿಗೆ ವಿಜಯನಗರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಅಣ್ಣಪ್ಪ, ಶ್ರೀಕಾಂತ್, ಮೌಲಾ ಹುಸೇನ್ ಶಿಕ್ಷೆಗೆ ಒಳಗಾದವರು. ಈ ಮೂವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬುಧವಾರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಡಿ.ಪಿ. ಕುಮಾರಸ್ವಾಮಿ ಜೈಲು ಶಿಕ್ಷೆ ಹಾಗೂ 58 ಸಾವಿರ ರೂ. ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ 30 ಸಾವಿರ ರೂ. ಪೊಲೀಸ್ ಕಾನ್ಸ್ಟೇಬಲ್ ಗೆ ನೀಡಬೇಕು. 28 ಸಾವಿರ ರೂ. ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ತಿಳಿಸಲಾಗಿದೆ.
2020ರ ಮಾರ್ಚ್ 14ರಂದು ಮಧ್ಯರಾತ್ರಿ 1.20ರ ಸುಮಾರಿಗೆ ಪೊಲೀಸ್ ಕಾನ್ಸ್ಟೇಬಲ್ ಮುತ್ತಣ್ಣ ಹೊಸಪೇಟೆ ಮುಖ್ಯ ಮಸೀದಿ ಎದುರು ಕರ್ತವ್ಯದಲ್ಲಿದ್ದರು. ಆಗ ಎರಡು ಬೈಕ್ ಗಳಲ್ಲಿ ಕೇಕೆ ಹಾಕಿಕೊಂಡು. ಕರ್ಕಶ ಸೈಲೆನ್ಸರ್ ಬಳಸಿ ಶಬ್ದ ಮಾಡುತ್ತಾ ಈ ಮೂವರು ಬಂದಿದ್ದು, ಅವರನ್ನು ತಡೆದು ಗಲಾಟೆ ಮಾಡಿದಂತೆ ಸೂಚಿಸಿ ಬುದ್ಧಿವಾದ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಅಣ್ಣಪ್ಪ ಪೊಲೀಸ್ ಮುತ್ತಣ್ಣ ಅವರ ಮೇಲೆ ಬೈಕ್ ಹತ್ತಿಸಲು ಯತ್ನಿಸಿದ್ದ. ಉಳಿದವರು ಕಲ್ಲಿನಿಂದ ಮುಖಕ್ಕೆ ಜಜ್ಜಿ ಗಾಯಗೊಳಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಇನ್ಸ್ಪೆಕ್ಟರ್ ಪ್ರಸಾದ್ ಕೆ. ಗೋಖಲೆ ಆರೋಪಿಗಳ ವಿರುದ್ಧ ದೋಷಾರೋಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲ ಟಿ. ಅಂಬಣ್ಣ ವಾದ ಮಂಡಿಸಿದ್ದರು.

