ಬೆಳಗಾವಿ: ಬೌದ್ಧ ಭಿಕ್ಕುಗಳಿಗೆ ಸರ್ಕಾರದಿಂದ ಮಾಸಿಕ ಗೌರವಧನ ಕೊಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಶಿವಕುಮಾರ್ ಬುದ್ಧ ವಿಹಾರಗಳನ್ನು ನಡೆಸಲು ಸರ್ಕಾರ ಅನುದಾನ ನೀಡಬೇಕು. 80 ಬುದ್ಧ ವಿಹಾರಗಳಿದ್ದು 200 ಬೌದ್ಧ ಭಿಕ್ಕುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಮಾಸಿಕ 6 ಸಾವಿರ ಸಂಭಾವನೆ ನೀಡಬೇಕು. ಅವರ ಸೇವಕರಿಗೆ 5 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಪರವಾಗಿ ಉತ್ತರ ನೀಡಿದ ರಾಮಲಿಂಗಾ ರೆಡ್ಡಿ, ಜೈನಬಸದಿ ಅರ್ಚಕರಿಗೆ 6 ಸಾವಿರ ರೂ., ಸಹಾಯಕ ಅರ್ಚಕರಿಗೆ 5 ಸಾವಿರ ರೂ. ಮಾಸಿಕ ಗೌರವಧನ ನೀಡಲಾಗುತ್ತಿದೆ. ಪೇಶ್ ಇಮಾಮ್ ಗಳಿಗೆ 6 ಸಾವಿರ ರೂ., ಮಯೀಜ್ಜೀನ್ ಗಳಿಗೆ 5 ಸಾವಿರ ರೂ. ನೀಡಲಾಗುತ್ತಿದೆ. ಬೌದ್ಧ ಭಿಕ್ಕುಗಳಿಗೆ ಕೂಡ ಸರ್ಕಾರ ಮಾಸಿಕ ಗೌರವಧನ ನೀಡಲಿದ್ದು, ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

