ಧಾರವಾಡ: ಯುವತಿಯನ್ನು ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ದ ಮಗನ ಸುಳಿವು ನೀಡುವಂತೆ ಒತ್ತಾಯಿಸಿ ಪೊಲೀಸರೇ ಯುವಕನ ತಾಯಿ ಮೇಲೆ ಠಾಣೆಯೊಳಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮುಳ್ಳಳ್ಳಿ ಗ್ರಾಮದ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮವ್ವ ಹಲ್ಲೆಗೊಳಗಾದ ಮಹಿಳೆ. ಅವರ ಪುತ್ರ ದೇವರಾಜ್ ಎದುರು ಮನೆಯ ಸುಧಾ ಎಂಬ ಯುವತಿಯನ್ನು ಪ್ರೀತಿಸಿ ತಿಂಗಳ ಹಿಂದೆ ಓಡಿಹೋಗಿ ಮದುವೆಯಾಗಿದ್ದ.
ಅಂತರ್ಜಾತಿ ಮದುವೆಯಾಗಿದ್ದರಿಂದ ಯುವತಿಯ ಮನೆಯವರು ಕುಂದಗೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಭಾನುವಾರ ಕುಂದಗೋಳ ಪೊಲೀಸರು ಲಕ್ಷ್ಮವ್ವ ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದ್ದಾರೆ. ಈ ವೇಳೆ ಮಹಿಳಾ ಸಿಬ್ಬಂದಿ ಹಾಗೂ ಪುರುಷ ಪೊಲೀಸ್ ಸಿಬ್ಬಂದಿ ಮಗನ ಸುಳಿವು ನೀಡುವಂತೆ ಲಕ್ಷ್ಮವ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಲಕ್ಷ್ಮವ್ವ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

