ಬೆಂಗಳೂರು: ಬೆಟ್ಟಿಂಗ್ ಆಪ್ ಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತನಿಖೆ ಎದುರಿಸಿರುವ ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್ ಕ್ಷಮೆ ಕೇಳಿದ್ದಾರೆ.
ಸಿಐಡಿ ಅಧಿಕಾರಿಗಳ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಪ್ರಕಾಶ್ ರಾಜ್, 2016ರಲ್ಲಿ ನಾನೊಂದು ಗೇಮಿಂಗ್ ಆಪ್ ಪ್ರಚಾರ ಮಾಡಿದ್ದೆ. ಆದರೆ ನಂತರ ಅದು ಬೆಟ್ಟಿಂಗ್ ಆಪ್ ಆಗಿ ಬದಲಾಯಿತು. ನನ್ನ ಒಪ್ಪಂದ ಕ್ಯಾನ್ಸಲ್ ಆಗಿತ್ತು. ಆದರೆ ನಾನು ಗೊತ್ತಿದ್ದೂ ಮಾಡಿದ್ದರೂ, ಗೊತ್ತಿಲ್ಲದೆಯೇ ಮಾಡಿದ್ದರೂ ಅದು ತಪ್ಪು. ಹಾಗಾಗಿ ನಾನು ಕ್ಷಮೆ ಕೇಳುತ್ತೇನೆ. ಕ್ಷಮಿಸಿ ಎಂದು ಹೇಳಿದ್ದಾರೆ.
ನಾನು ಎಲ್ಲಾ ಧಾಖಲೆಗಳನ್ನು ಅಧಿಕಾರಿಗಳಿಗೆ ಕೊಟ್ಟಿದ್ದೇನೆ. ಬ್ಯಾಂಕ್ ಮಾಹಿತಿ ಮತ್ತು ಸಂಬಂಧಿಸಿದ ಎಲ್ಲಾ ವಿವರಗಳನ್ನು ತನಿಖಾ ತಂಡಕ್ಕೆ ನೀಡಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ಯುವ ಜನತೆ ಬೆಟ್ಟಿಂಗ್ ಜಾಲಕ್ಕೆ ಸಿಲುಕುತ್ತಿರುವುದು ಕಳವಳಕಾರಿ. ಹಲವು ಯುವಕರು ಇದರಿಂದಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಕುಟುಂಬ ತೊಂದರೆ ಅನುಭವಿಸುವಂತಾಗಿದೆ. ಕಷ್ಟಪಟ್ಟು ದುಡಿದರೆ ಮಾತ್ರ ಹಣ, ಯಶಸ್ಸು ಸಿಗುತ್ತದೆ. ಆಪ್ ವಿಚಾರದಲ್ಲಿ ನನ್ನನ್ನು ದಯವಿಟ್ಟು ಕ್ಷಮಿಸಿ. ನಾನು ಇನ್ನೆಂದೂ ಈ ರೀತಿಯ ತಪ್ಪು ಮಾಡುವುದಿಲ್ಲ ಎಂದು ಹೇಳಿದರು.
