ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಠಾಣೆಯ ಸಿಪಿಐ ಸಂತೋಷ್ ಹಳ್ಳೂರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಸಿಪಿಐ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ.
ಲೋಕಾಯುಕ್ತದಲ್ಲಿ ಸಿಪಿಐ ಸಂತೋಷ್ ಹಳ್ಳೂರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮೀರಸಾಬ್ ಮುಜಾವರ್ ಎನ್ನುವವರು ಸಿಪಿಐ ಅವರ ವಿರುದ್ಧ ಲಂಚದ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀರಸಾಬ್ ಮುಜಾವರ್ ಅವರು ಅನೂಪ್ ಕುಮಾರ್ ನಾಯರ್ ಎನ್ನುವವರಿಗೆ ಎರಡು ಸೈಟ್ ಕೊಡಿಸುವ ನೆಪದಲ್ಲಿ 20 ಲಕ್ಷ ರೂಪಾಯಿ ಹಣವನ್ನ ಕೊಟ್ಟಿದ್ದರು. ಆದರೆ ಸೈಟ್ ಮಾತ್ರ ಕೊಟ್ಟಿರಲಿಲ್ಲ. ಹಾಗಾಗಿ ಸೈಟ್ ನೀಡದ ಹಿನ್ನೆಲೆಯಲ್ಲಿ ಹಣ ವಾಪಾಸ್ ಕೊಡಿಸುವಂತೆ ಪೊಲೀಸ್ ಠಾಣೆ ಮೊರೆ ಹೋಗಿದ್ದರು. ಈ ವೇಳೆ ಸಿಪಿಐ ಹಳ್ಳೂರ ಅವರು ಒಂದು ಲಕ್ಷ ರೂಪಾಯಿ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವಿಚಾರವಾಗಿ ಮೀರಸಾಬ್ ಮತ್ತು ಸಿಪಿಐ ನಡುವೆ ಹಣದ ವಿಚಾರವಾಗಿ ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೋ ವೈರಲ್ ಆಗಿದೆ. ಆಡಿಯೋ ದಾಖಲೆಯನ್ನು ಲೋಕಾಯುಕ್ತ ಅಧಿಕಾರಿಗಳಿಗೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಅಥಣಿ ಠಾಣೆ ಹಾಗೂ ಸಿಪಿಐ ಹಳ್ಳೂರ್ ನಿವಾಸದ ಮೇಲೆ ಲೋಕಾಯುಕ್ತ ಅಧ್ಹಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಸಿಪಿಐ ಪರಾರಿಯಾಗಿದ್ದಾರೆ.
