HomeLatest Newsಬಂಡವಾಳ ಹೂಡಿಕೆ ಆಕರ್ಷಣೆ ಸಭೆ: ಸಭೆಯ ನಿರ್ಣಯಗಳನ್ನು ಸಕಾಲದಲ್ಲಿ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ:...

ಬಂಡವಾಳ ಹೂಡಿಕೆ ಆಕರ್ಷಣೆ ಸಭೆ: ಸಭೆಯ ನಿರ್ಣಯಗಳನ್ನು ಸಕಾಲದಲ್ಲಿ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧ ಸಭಾಂಗಣದಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆ ಸಭ ನಡೆಯಿತು. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು.

ಸಭೆಯ ಮುಖ್ಯಾಂಶಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

• ಕರ್ನಾಟಕ ದೇಶದಲ್ಲೇ ಪ್ರಗತಿಪರ ರಾಜ್ಯವಾಗಿದ್ದು, ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವನ್ನು ಇನ್ನಷ್ಟು ಉತ್ತಮಪಡಿಸಬೇಕು. ಯಾವುದೇ ಕಾರಣಕ್ಕೂ ಅನುಮೋದನೆಗಳ ನೀಡಿಕೆಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು. ಈ ಕುರಿತು ಮುಖ್ಯ ಕಾರ್ಯದರ್ಶಿಯವರು ಎಲ್ಲಾ ಇಲಾಖೆಗಳಿಗೆ ಸೂಕ್ತ ನಿರ್ದೇಶನಗಳನ್ನು ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

• ಕೈಗಾರಿಕಾ ಸ್ನೇಹಿ ವ್ಯವಸ್ಥೆಯನ್ನು ಉತ್ತಮಪಡಿಸಲು ಕಾನೂನು ಮತ್ತು ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿಗಳನ್ನು ತರುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದರು.

• ಕೈಗಾರಿಕೆಗಳ ಆರಂಭಕ್ಕೆ ಅಗತ್ಯವಾದ ಭೂ ಬಳಕೆ ಬದಲಾವಣೆ ಪ್ರಕ್ರಿಯೆ ಸೇರಿದಂತೆ ವಿವಿಧ ಎನ್‌ಒಸಿಗಳ ನೀಡಿಕೆಯ ಕಾಲಮಿತಿಯನ್ನು ಕಡಿಮೆ ಮಾಡಬೇಕು. ಕಾಲಮಿತಿಯನ್ನು ಕಡಿಮೆ ಮಾಡುವ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡಬಾರದು.

• ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಇಲಾಖೆ ಅನುಮೋದನೆ ವಿಳಂಬವಾಗುತ್ತಿದ್ದು, ಇದನ್ನು ತ್ವರಿತಗೊಳಿಸಬೇಕು. ಇದಕ್ಕಾಗಿ ಮಂಡಳಿಯ ನಿಯಮಾವಳಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು. ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಅನುಮೋದನೆ ನೀಡುವ ಕಾಲಮಿತಿಯನ್ನು ಮರು ನಿಗದಿಪಡಿಸಬೇಕು. ಕಾಲಮಿತಿಯಲ್ಲಿ ಅನುಮೋದನೆಗಳನ್ನು ನೀಡಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

• ಕೈಗಾರಿಕೆಗಳಿಗೆ ರಸ್ತೆ, ನೀರು, ವಿದ್ಯುತ್‌ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ಕುರಿತಾಗಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದರು.

• ಹಸಿರು ಇಂಧನ ಮೂಲಗಳಿಂದ ಕೈಗಾರಿಕೆಗಳಿಗೆ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಅಸಾಂಪ್ರದಾಯಿಕ ಇಂಧನ ಮೂಲಗಳಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ವ್ಯವಸ್ಥಿತ ಯೋಜನೆ ರೂಪಿಸಬೇಕು.

• ಕೇಂದ್ರ ಸರ್ಕಾರ 2ಪ್ರಮುಖ ಕಾರ್ಮಿಕ ಸುಧಾರಣೆಗಳ ಅನುಷ್ಠಾನವನ್ನು ಪ್ರಸ್ತಾಪಿಸಿದೆ. ಕಾರ್ಮಿಕರ ಕೆಲಸದ ಅವಧಿಯನ್ನು ಮರು ನಿಗದಿಪಡಿಸುವ ಸಂದರ್ಭದಲ್ಲಿ ಕಾರ್ಮಿಕರ ಹಿತವನ್ನು ಗಮನದಲ್ಲಿಡಲಾಗುವುದು.

• ಏಕಗವಾಕ್ಷಿ ವ್ಯವಸ್ಥೆಯಡಿ ಅರ್ಜಿಗಳ ವಿಲೇವಾರಿ ಆಗುತ್ತಿಲ್ಲ ಎಂದು ದೂರುಗಳಿವೆ. ಎಲ್ಲಾ ಸೇವೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ 29 ಸೇವೆಗಳು ಏಕಗವಾಕ್ಷಿ ವ್ಯವಸ್ಥೆಯಿಂದ ಹೊರಗಿದ್ದು, ಅವುಗಳನ್ನು ಸಹ ಇದರಡಿ ತರಬೇಕು. ಎಲ್ಲಾ ಅರ್ಜಿಗಳನ್ನು ಏಕಗವಾಕ್ಷಿ ವ್ಯವಸ್ಥೆಯಡಿ ಏಕೀಕೃತ ವಿಲೇವಾರಿಗೆ ಕ್ರಮ.

• ರಾಜ್ಯದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರೂ.10.27 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಲಾಗಿದ್ದು, ಈಗಾಗಲೇ ಶೇ.60ರಷ್ಟು ಹೂಡಿಕೆಗಳು ಅನುಷ್ಠಾನ ಹಂತದಲ್ಲಿವೆ.

• ಸುಮಾರು ರೂ.1.5ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ವಿವಿಧ ಹಂತದಲ್ಲಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

For Latest News Updates, Join Our Whatsapp Community🚩
RELATED ARTICLES

Most Popular