ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಕೆಲ ಬದಲಾವಣೆಯಿಂದ ಸುಗಮವಾಗಿ ದರ್ಶನ

ಹಾಸನ: ಶ್ರೀ ಹಾಸನಾಂಬ ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಸಾಗುತ್ತಿದ್ದ ಜನರನ್ನು ಇಂದು ಮಾತನಾಡಿಸಲು ಹೋದ ಸಂದರ್ಭದಲ್ಲಿ ಅವರು ಮಾತನಾಡಲು ನಿಲ್ಲುವುದಕ್ಕೆ ಆಗದ ರೀತಿ ಲೈನ್ ಮುಂದೆ ಸಾಗುತ್ತಿದೆ. ಅಷ್ಟು ಸರಾಗವಾಗಿ ದರ್ಶನ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಸಂತೋಷವಾಗುತ್ತಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ.

ದೇವಾಲಯದ ಆವರಣದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅರ್ಧ ದಿನದ ದರ್ಶನದಲ್ಲಿ 91 ಸಾವಿರ ಜನ ಅತೀ ಕಡಿಮೆ ಅವಧಿಯಲ್ಲಿ ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ ಎಂದರೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ನಾವು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸೇರಿಕೊಂಡು ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ. ಅದನ್ನು ಜಿಲ್ಲಾಡಳಿತ ಸಮರ್ಪಕವಾಗಿ ಅನುಷ್ಠಾನ ಮಾಡಿರುವುದಕ್ಕೆ ಸಾರ್ಥಕತೆ ಆಗಿದೆ. ಎಲ್ಲೋ ಒಂದು ಕಡೆ ಶ್ರೀ ಸಾಮಾನ್ಯರಿಗೆ ಚೆನ್ನಾಗಿ ದರ್ಶನ ಆಗುತ್ತಿದೆ ಎಂದರೆ ಅದು ನಮಗೆ ಬಹಳ ಸಂತೋಷದ ಸಂಗತಿ ಎಂದು ತಿಳಿಸಿದರು.

ಹಾಸನದ ಸ್ಥಳೀಯರಿಗೆ ನಮ್ಮ ಊರಿನ ದೇವರ ದರ್ಶನ ಮಾಡಲು ನಮಗೆ ಅವಕಾಶವಿಲ್ಲ ಎನ್ನುವ ಆತಂಕವಿತ್ತು ಆದರೆ ಇಂದು ಸ್ಥಳಿಯರು ಕೂಡಾ ಆರಾಮಾಗಿ ದರ್ಶನ ಮಾಡಿಕೊಂಡು ಹೋಗುತ್ತಿದ್ದಾರೆ. ಗಣ್ಯರಿಗೂ ಸರಾಗವಾಗಿ ದರ್ಶನ ನಡೆಯುತ್ತಿದೆ ಎಂದರಲ್ಲದೆ, ಹೊಸ ಬದಲಾವಣೆ ತಂದಾಗ ಆತಂಕವಿತ್ತು. ಆದರೆ ಮೊದಲನೇ ದಿನ ಸರಾಗವಾಗಿ ದರ್ಶನ ಕಾರ್ಯಕ್ರಮ ನಡೆಯಿತು. ಎರಡನೇ ದಿನ ಶನಿವಾರ ಎರಡುಪಟ್ಟು ಜನ ಬರುತ್ತಾರೆ ಎಂಬ ಆತಂಕವಿತ್ತು. ಇಂದು ಎರಡು ಪಟ್ಟು ಜನ ಬಂದಿದ್ದರೂ ಕೂಡಾ ನಿನ್ನೆಗಿಂತ ವೇಗವಾಗಿ ದರ್ಶನವಾಗಿದೆ ಯಾವುದು ಕೂಡಾ ವ್ಯತ್ಯಾಸವಾಗಿಲ್ಲ ಎಂದರು.

ಕಳೆದ ವರ್ಷದಲ್ಲಿ 5-6 ಗಂಟೆಗೆ ಧರ್ಮದರ್ಶನ ಮಾಡಬೇಕಾದ ಪರಿಸ್ಥಿತಿ ಇತ್ತು, ಆದರೆ ಇಂದು 01 ರಿಂದ 1.30 ಗಂಟೆಗೆ ಸುಗಮವಾಗಿ ಸುಲಲಿತವಾಗಿ ದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರಲ್ಲದೆ, ನಾಡಿನ ವಿವಿಧ ಭಾಗಗಳಿಂದ ಕಲಾವಿದರನ್ನು ಕರೆಸಿ ಅವರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಭಕ್ತಾದಿಗಳಿಗೆ ಜಾನಪದ ಕಲೆ, ಸುಗಮ ಸಂಗೀತದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಸನಾಂಬ ಕಲಾಕ್ಷೇತ್ರ ಸೇರಿದಂತೆ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದೆ. ಆ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವಂತೆ ತಿಳಿಸಿದರು.

ಈ ವೇಳೆಯಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪೂರ್ಣಿಮಾ ಬಿ.ಆರ್, ಉಪ ವಿಭಾಗಾಧಿಕಾರಿ ಹಾಗೂ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಮಾರುತಿ ಮತ್ತಿತರರು ಹಾಜರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read