ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಈ ಹಿಂದೆ ನಿಗದಿ ಮಾಡಿದ್ದ ಗಡುವು ಅಕ್ಟೋಬರ್ 7ಕ್ಕೆ ಮುಕ್ತಾಯವಾಗಲಿದ್ದು, ಅದನ್ನು ಐದು ದಿನ ವಿಸ್ತರಿಸಲಾಗಿದೆ. ಅಕ್ಟೋಬರ್ 12 ರವರೆಗೆ ಸಮೀಕ್ಷೆ ಅವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಮೀಕ್ಷೆಗೆ ಈ ಮೊದಲು ನಿಗದಿಪಡಿಸಿದ್ದ ಗಡುವು ಮಂಗಳವಾರಕ್ಕೆ ಮುಕ್ತಾಯವಾಗಲಿದೆ. ಅಕ್ಟೋಬರ್ 6ರವರೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊರತುಪಡಿಸಿ 1.15 ಕೋಟಿ ಕುಟುಂಬಗಳ ಅಂದರೆ ಶೇಕಡ 80.39ರಷ್ಟು ಗಣತಿ ಪೂರ್ಣವಾಗಿದೆ.
ಸೆ. 22 ರಂದು ಆರಂಭವಾಗಿದ್ದ ಸಮೀಕ್ಷೆ ಪೂರ್ಣಗೊಳಿಸಲು ಅಕ್ಟೋಬರ್ 12 ರವರೆಗೆ ಗಣತಿ ಕಾರ್ಯ ವಿಸ್ತರಿಸಲಾಗಿದೆ. ಅಕ್ಟೋಬರ್ 12 ರವರೆಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಕ್ಷಕರಿಗೆ ಶಾಲೆ ಕೆಲಸ, ನಂತರ ಸಮೀಕ್ಷೆಯಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ.
ಸಮೀಕ್ಷೆ ಪೂರ್ಣಗೊಳಿಸಲು ಇನ್ನೂ ಹೆಚ್ಚಿನ ಕಾಲಾವಕಾಶದ ಅಗತ್ಯವಿರುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ, ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಧ್ಯವಾರ್ಷಿಕ ರಜಾ ದಿನಗಳ ನಂತರ ಶಾಲಾ ತರಗತಿಗಳು ಸಮೀಕ್ಷೆಯ ಕಾರಣದಿಂದ ಕುಂಠಿತವಾಗಬಾರದು ಎನ್ನುವ ದೃಷ್ಟಿಯಿಂದ ಈ ಕೆಳಗಿನ ಸೂಚನೆಗಳಂತೆ ಕ್ರಮವಹಿಸುವುದು.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ: ಈ ವ್ಯಾಪ್ತಿಯಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಿ: 8-10-2025 ರಿಂದ 24-10-2025 ರವರೆಗೆ ಶಾಲಾ ತರಗತಿಗಳನ್ನು ಬೆಳಿಗೆ 8.00 ಗಂಟೆಯಿಂದ ಅಪರಾಹ್ನ 1.00 ಗಂಟೆಯವರೆಗೆ ನಿರ್ವಹಿಸಿ, ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯವನ್ನು ನಿರ್ವಹಿಸುವುದು. ಸಮೀಕ್ಷೆಯನ್ನು ಕೈಗೊಂಡು ದಿನಾಂಕ: 24-10-2025 ರ ಅಂತ್ಯದೊಳಗೆ ಪೂರ್ಣಗೊಳಿಸುವುದು.
ರಾಜ್ಯದ ಇತರೆ ಭಾಗಗಳಲ್ಲಿ (ಗ್ರೇಟರ್ ಬೆಂಗಳೂರು ವ್ಯಾಪ್ತಿ ಹೊರತುಪಡಿಸಿ ಉಳಿದ ಭಾಗಗಳು): ಈ ವ್ಯಾಪ್ತಿಯಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಿ: 8-10-2025 ರಿಂದ 12-10-2025 ರವರೆಗೆ ಶಾಲಾ ತರಗತಿಗಳನ್ನು ಬೆಳಿಗ್ಗೆ 8.00 ಗಂಟೆಯಿಂದ ಅಪರಾಹ್ನ 1.00 ಗಂಟೆಯವರೆಗೆ ನಿರ್ವಹಿಸಿ, ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯವನ್ನು ನಿರ್ವಹಿಸುವುದು. ಸಮೀಕ್ಷೆಯನ್ನು ರಜಾ ದಿನಗಳಲ್ಲಿಯೂ ಕೈಗೊಂಡು ದಿನಾಂಕ: 12-10-2025 ರ ಅಂತ್ಯದೊಳಗೆ ಪೂರ್ಣಗೊಳಿಸುವುದು.
ಈ ಎಲ್ಲ ಅಂಶಗಳಂತೆ ರಾಜ್ಯದ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಕಾರ್ಯನಿರ್ವಹಿಸುವುದು.
ವಿಶೇಷ ಸೂಚನೆ:- ಕಾಲಕಾಲಕ್ಕೆ ಸರ್ಕಾರದಿಂದ ನೀಡುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

