ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಸುಮಾರು 2000 ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮಕ್ಕಾಗಿ ಹೊಸಪೇಟೆ ರಸ್ತೆಯ ಅಗಡಿ ಲೇಔಟ್ ನಲ್ಲಿ ವಿಧಾನಸೌಧ ಮಾದರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಕೊಪ್ಪಳ ನಗರದಾದ್ಯಂತ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಗಳು ರಾರಾಜಿಸುತ್ತಿವೆ.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಸಚಿವರು ಭಾಗವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ 34 ವಸತಿ ನಿಲಯಗಳು, ಗಂಗಾವತಿ ತಾಲೂಕಿನ 27 ಕೆರೆ ತುಂಬಿಸುವ ಯೋಜನೆಗೆ ಭೂಮಿ ಪೂಜೆ, ಕನಕಗಿರಿ ತಾಲೂಕಿನ ಶಿರವಾರದಲ್ಲಿ ಹೈಟೆಕ್ ತೋಟಗಾರಿಕಾ ಪಾರ್ಕ್ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ.