ಮಂಡ್ಯ ಸಕ್ಕರೆ ಕಾರ್ಖಾನೆ ಮುಚ್ಚಲ್ಲ, ಲಾಭದಾಯಕವಾಗಿಸಲು ಕ್ರಮ: ಸಿಎಂ ಸಿದ್ಧರಾಮಯ್ಯ

ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಮುಚ್ಚುವುದು ಸಾಧ್ಯವಿಲ್ಲ. ಆದರೆ ಅದನ್ನು ಲಾಭದಾಯಕವಾಗಿಸಲು ಮಾಡಬೇಕಾದ ಕೆಲಸಗಳೇನು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಚರ್ಚೆ ಮಾಡಬೇಕು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಗಗನಚುಕ್ಕಿ ಜಲಪಾತೋತ್ಸವ -2025 ರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಂಡ್ಯ ಸಕ್ಕರೆ ಕಾರ್ಖಾನೆಗೆ 113 ಕೋಟಿ ರೂ.ಳನ್ನು ಒದಗಿಸಿದೆ. ಅಧಿಕಾರಕ್ಕೆ ಬಂದ ಕೂಡಲೇ 50 ಕೋಟಿಗಳನ್ನು ಒದಗಿಸಿ, ನಂತರ 52  ಕೋಟಿ ರೂ.ಗಳ ವಿದ್ಯುತ್ ಶಕ್ತಿಯ ಬಾಕಿ ಬಿಲ್‌ ಅನ್ನು ಮನ್ನಾ ಮಾಡಲಾಯಿತು. ಇದಲ್ಲದೆ 10 ಕೋಟಿಯನ್ನು ಮತ್ತೆ ಒದಗಿಸಲಾಗಿದೆ. ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ನಷ್ಟವಿಲ್ಲದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಇದಕ್ಕೆ ಅಗತ್ಯವಿರುವ ಬಾಯ್ಲಿಂಗ್ ಹೌಸ್ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದರು.

ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಪ್ರಕೃತಿ ಸೌಂದರ್ಯವನ್ನು ಜನರು ಕಾಣಲು ಬರಬೇಕು ಎಂಬ ಉದ್ದೇಶದಿಂದ ಸರ್ಕಾರವೇ ಜಲಪಾತೋತ್ಸವವನ್ನು ಆಚರಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಅನೇಕ ನದಿಗಳಿವೆ. ಕಾವೇರಿ, ಕೃಷ್ಣಾ, ತುಂಗಭದ್ರೆ, ಶರಾವತಿ ನದಿಗಳು ನಮ್ಮ ರಾಜ್ಯದ ಆರ್ಥಿಕತೆ ವೃದ್ಧಿಸಲು ಸಹಕಾರಿಯಾಗಿವೆ. ಗಗನಚುಕ್ಕಿ ಕಾವೇರಿ ನದಿ ಕವಲೊಡೆದು 300 ಅಡಿ ಎತ್ತರದಿಂದ ನೆಲಕ್ಕೆ ಬೀಳುತ್ತದೆ. ಇದು ಅತ್ಯಂತ ಸುಂದರ ಹಾಗೂ ಸೊಗಸಾದ ಪ್ರದೇಶವಾಗಿದ್ದು, ಇದು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದೆ. ಈ ವಾತಾವರಣವನ್ನು ಅನುಭವಿಸಲು ಹೆಚ್ಚು ಜನ ಬರಬೇಕು. ಇದಕ್ಕಾಗಿಯೇ ನಾವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದರು.

ಕಳೆದ ಎರಡು ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಂಡ್ಯ ಜಿಲ್ಲೆಯಲ್ಲಿ ಇದಕ್ಕಾಗಿ 3,200 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಬೇಕು ಹಾಗೂ ಮಹಿಳೆಯರೂ ಸ್ವಾವಲಂಬಿಗಳಾಗಬೇಕೆಂಬ ಕಾರಣದಿಂದ ಈ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಬಾರಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಈ ಬಾರಿ 492 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಲಾಗಿದೆ. ನಮ್ಮ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ಕಾವೇರಿ ನದಿಯ ಕುರಿತು ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ವ್ಯಾಜ್ಯ ಈಗ ಇಲ್ಲ. ಮಳೆ ಸರಿಯಾಗಿ ಆಗಿದ್ದರೆ ಮಾತ್ರ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಒದಗಿಸಬೇಕೆಂದು ತೀರ್ಮಾನವಾಗಿದೆ. ಮಳೆಯಾಗಿಲ್ಲದಿದ್ದರೆ ಸಂಕಷ್ಟ ಸೂತ್ರ ಜಾರಿಗೆ ಬಂದು, ಅದರಂತೆ ನೀರನ್ನು ಹಂಚಿಕೆ ಮಾಡಲಾಗುವುದು. ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ಏಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ರಾಜಕೀಯಕ್ಕಾಗಿ ಇದನ್ನು ಆಕ್ಷೇಪಿಸುತ್ತಿದ್ದಾರೆ. ರಾಜ್ಯವು 98 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕಿತ್ತು. ಆದರೆ ಇಂದಿನವರೆಗೆ 221 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ. ನಾವು  ಕೊಡಬೇಕಿದ್ದ ನೀರಿಗಿಂತಲೂ 122 ಟಿಎಂಸಿ ನೀರು ಹೆಚ್ಚಾಗಿ ಹರಿದು ಹೋಗಿದೆ. ಮಳೆ ಉತ್ತಮವಾಗಿ ಆದರೆ ನೀರನ್ನು ಕೊಟ್ಟೆ ಕೊಡುತ್ತೇವೆ ಎಂದರು.

ಅದೃಷ್ಟವಶಾತ್ ನಾವು ಅಧಿಕಾರಕ್ಕೆ ಬಂದ ಮೇಲೆ ಎರಡು ವರ್ಷವೂ ಒಳ್ಳೆ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಈ ವರ್ಷ ವಿದ್ಯುತ್ ಅಭಾವ ಬರಲು ಸಾಧ್ಯವಿಲ್ಲ. ನಮಗೂ ತಮಿಳುನಾಡಿಗೂ ನೀರಿನ ವಿಷಯವಾಗಿ ವಿವಾದವೂ ಬರುವುದಿಲ್ಲ. ಮಳೆ ಸಕಾಲಕ್ಕೆ ಆದರೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ.

ಮೇಕೆದಾಟು ಯೋಜನೆ ಜಾರಿಗೆ ತರಲು ತಮಿಳುನಾಡು ಹಾಗೂ ಕೇಂದ್ರ ಸರ್ಕಾರ ತಕರಾರು ಮಾಡಬಾರದು. ಮೇಕೆದಾಟು ಅಣೆಕಟ್ಟಿನಿಂದ 66 ಟಿಎಂಸಿ ನೀರನ್ನು ಶೇಖರಣೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ತಮಿಳುನಾಡು ಹಾಗೂ ಕರ್ನಾಟಕಕ್ಕೂ ಉಪಯೋಗವಾಗುತ್ತದೆ. ಮಳೆ ಬಾರದಿದ್ದಾಗ ತಮಿಳುನಾಡಿಗೆ ನೀರನ್ನು ಹರಿಸಲು ಮತ್ತು ಹೆಚ್ಚು ಮಳೆ ಬಂದಾಗ ಸಮುದ್ರ ಪಾಲಾಗುವ ನೀರನ್ನು ಸಂಗ್ರಹ ಮಾಡಲು ಅನುಕೂಲವಾಗಲಿದೆ.

ಗಗನಚುಕ್ಕಿ ಜಲಪಾತ ಅಭಿವೃದ್ಧಿಗೆ 6 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಜನ ಕೂತು ನೋಡಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಜನರು ಜಲಪಾತ ವೀಕ್ಷಿಸಲು ಬರಬೇಕು. ಕಳೆದ ಮೂರು ವರ್ಷಗಳಲ್ಲಿ 22 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಶಿವನಸಮುದ್ರ ಜಲಾಶಯದಲ್ಲಿ 1902 ರಲ್ಲಿ ಏಷ್ಯಾದಲ್ಲಿಯೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಿದ ಕೇಂದ್ರ ಎಂಬ ಹೆಗ್ಗಳಿಕೆಯಿದೆ.

ರಾಜ್ಯ ಇಂದು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೆ ಅದಕ್ಕೆ ಶಿವನಸಮುದ್ರ ಮೂಲ ಕಾರಣ. ಪ್ರಸ್ತುತ ಕರ್ನಾಟಕಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಅದನ್ನು ಬಳಸಿಕೊಳ್ಳುವ ಕೆಲಸವೂ ಆಗುತ್ತಿದೆ. ಉತ್ಪಾದಿಸಿದ ವಿದ್ಯುತ್ ನಿಂದ ರೈತರಿಗೆ ಉಪಯೋಗವಾಗುತ್ತಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read