ನವದೆಹಲಿ: ಹಳೆ ವಾಹನಗಳ ಬಳಕೆಯಿಂದ ಪರಿಸರ ಮಾಲಿನ್ಯ ತಡೆಯುವ ಸಲುವಾಗಿ 20 ವರ್ಷಕ್ಕೂ ಹಳೆಯ ಮೋಟಾರ್ ವಾಹನಗಳ ಮರುಬಳಕೆಗೆ ಅಗತ್ಯವಾದ ನವೀಕರಣ ಶುಲ್ಕವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ.
ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು ಲಘು ಮೋಟಾರ್ ವಾಹನಗಳು(LMV) ನವೀಕರಣ ನೋಂದಣಿ ಶುಲ್ಕವನ್ನು ದುಪ್ಪಟ್ಟು ಮಾಡಿದೆ. ಈ ಮೊದಲು 5,000 ರೂ. ಇದ್ದ ಶುಲ್ಕವನ್ನು 10 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 20 ವರ್ಷಕ್ಕೂ ಹಳೆಯ ಮೋಟರ್ ಸೈಕಲ್ ಗಳ ನವೀಕರಣ ಶುಲ್ಕವನ್ನು ಒಂದು ಸಾವಿರದಿಂದ ಎರಡು ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ತ್ರಿಚಕ್ರ ವಾಹನಗಳ ಶುಲ್ಕವನ್ನು 5,000 ರೂ.ಗೆ ನಿಗದಿಪಡಿಸಲಾಗಿದೆ.
2021ರ ಅಕ್ಟೋಬರ್ ನಲ್ಲಿ ಹಳೆಯ ವಾಹನಗಳ ನವೀಕರಣ ಶುಲ್ಕವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ಹಳೆಯ ವಾಹನಗಳ ನವೀಕರಣ ಶುಲ್ಕವನ್ನು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೆಚ್ಚಳ ಮಾಡಿದೆ.