ಬೆಂಗಳೂರು : ವಿಧಾನಸೌಧದ ಬಳಿ ಅಭಿಮಾನಿಗಳಿಂದ ನೂಕು ನುಗ್ಗಲು ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಹೌದು, ಒಂದು ಕಡೆ ವಿಧಾನಸೌಧದ ಬಳಿ ಅಭಿಮಾನಿಗಳು ಜಮಾಯಿಸಿದರೆ. ಇನ್ನೊಂದು ಕಡೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ವಿಧಾನಸೌಧದ ಬಳಿ ಅಭಿಮಾನಿಗಳಿಂದ ನೂಕು ನುಗ್ಗಲು ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಐಪಿಎಲ್ ಟ್ರೋಫಿ ಹಿಡಿದು ಆರ್ ಸಿಬಿ (RCB) ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. 18 ವರ್ಷದ ಬಳಿಕ ಐಪಿಎಲ್ ಟ್ರೋಫಿ ಗೆದ್ದಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಆಟಗಾರರು ಮೊದಲ ಟ್ರೋಫಿ ಕೈಯಲ್ಲಿ ಹಿಡಿದು ಬೆಂಗಳೂರಿಗೆ ಆಗಮಿಸಿದ್ದಾರೆ.
ಅಭಿನಂದನಾ ಸಮಾರಂಭ :
ಐಪಿಎಲ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಗೆಲುವು ಸಾಧಿಸಿ ಐಪಿಎಲ್ ಕಪ್ ಗೆದ್ದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆರ್ ಸಿಬಿ ಆಟಗಾರರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಗಳ ಮೇಲೆ ಆರ್ ಸಿಬಿ ಆಟಗಾರರನ್ನು ಸರ್ಕಾರದ ವತಿಯಿಂದ ಗೌರವಿಸಿ, ಅಭಿನಂದಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.,ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿರಲಿದ್ದಾರೆ. ಆದರೆ ಅಭಿನಂದನಾ ಕಾರ್ಯಕ್ರಮಕ್ಕೆ ವಿಧಾನಸೌಧಕ್ಕೆ ಅಭಿಮನಿಗಳ ಪ್ರವೇಶಕ್ಕೆ ಅವಕಾಶವಿಲ್ಲ.
ಈ ಬಗ್ಗೆ ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ ಮಾಹಿತಿ ನೀಡಿದ್ದು, ಭದ್ರತೆಯ ದೃಷ್ಟಿಯಿಂದ ವಿಧಾನಸೌಧದ ಬಳಿ, ಅಭಿಮಾನಿಗಳಿಗೆ ಎಂಟ್ರಿ ಇಲ್ಲ. ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಅಲ್ಲಿ ಸಂಭ್ರಮಾಚರಣೆ ಮಾಡಬಹುದು ಎಂದು ತಿಳಿಸಿದ್ದಾರೆ. ಇನ್ನು ಆರ್ ಸಿಬಿ ತಂಡದ ಆಟಗಾರರಿಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಯಾವುದೇ ತೆರದ ವಾಹನದ ಮೆರವಣಿಗೆ ಇರುವುದಿಲ್ಲ. ಆಟಗಾರರು ಬಸ್ ನಲ್ಲಿಯೇ ಬಂದು ವಿಧಾನಸೌಧದಿಂದ ಬಸ್ ನಲ್ಲಿಯೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳುತ್ತಾರೆ. ಭದ್ರತೆ ದೃಷ್ಟಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

