ಭಾರತದ ಮೊದಲ ʼಟೆಸ್ಟ್ ಟ್ಯೂಬ್ ಬೇಬಿʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !

ಮಕ್ಕಳನ್ನು ಹೊಂದುವ ಸಂತೋಷಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂಬುದು ವಾಡಿಕೆ. ಆದರೆ 1978ರ ಮೊದಲು, ಎಷ್ಟೇ ಪ್ರಯತ್ನಿಸಿದರೂ ಪೋಷಕರಾಗಲು ಸಾಧ್ಯವಾಗದ ಅದೆಷ್ಟೋ ಜನರಿಗೆ ಇದು ಕನಸಾಗಿಯೇ ಉಳಿದಿತ್ತು. ಅಂತಹ ದಂಪತಿಗಳ ಪಾಲಿಗೆ ಕೋಲ್ಕತ್ತಾದ ಡಾ. ಸುಭಾಷ್ ಮುಖೋಪಾಧ್ಯಾಯ ಅವರು ಕೈಗೊಂಡ ವೈದ್ಯಕೀಯ ಪ್ರಯೋಗವೊಂದು ವರದಾನವಾಯಿತು. ಅದುವೇ ಟೆಸ್ಟ್ ಟ್ಯೂಬ್ ಬೇಬಿ ತಂತ್ರಜ್ಞಾನ ! ಇಂದು ಟೆಸ್ಟ್ ಟ್ಯೂಬ್ ಬೇಬಿ ಸಾಮಾನ್ಯ ಪದ ಅಥವಾ ತಾಯಿಯಾಗಲು ಅತ್ಯಂತ ಸರಳ ಪ್ರಕ್ರಿಯೆ ಎನಿಸಿದರೂ, 1978 ರಲ್ಲಿ ಪರಿಸ್ಥಿತಿ ತೀರ ಭಿನ್ನವಾಗಿತ್ತು.

ಆದರೆ, ಈ ಕ್ರಾಂತಿಕಾರಿ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸಿದ ವೈದ್ಯರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು ಎಂಬುದು ದುರಂತ. ಯಾಕೆ ಹೀಗಾಯಿತು ಎಂಬ ಪ್ರಶ್ನೆ ಮೂಡುವುದು ಸಹಜ.

ಡಾ. ಸುಭಾಷ್ ಮುಖೋಪಾಧ್ಯಾಯ ಅವರು ಟೆಸ್ಟ್ ಟ್ಯೂಬ್ ಬೇಬಿ ಪ್ರಯೋಗಗಳನ್ನು ನಡೆಸುತ್ತಿದ್ದ ಸಮಯದಲ್ಲಿ, ದೇಶದಲ್ಲಿ ಇದರ ಬಗ್ಗೆ ಯಾರೂ ಯೋಚಿಸುತ್ತಿರಲಿಲ್ಲ. ಅವರು ತಮ್ಮ ಸಂಶೋಧನೆಗಳನ್ನು ಘೋಷಿಸಿದಾಗ, ಇತರ ವೈದ್ಯರು ಸಹ ಅದನ್ನು ಒಪ್ಪಲು ಸಿದ್ಧರಿರಲಿಲ್ಲ. ಅಷ್ಟೇ ಅಲ್ಲ, ಅಂದಿನ ಸರ್ಕಾರವೂ ಅವರ ಸಾಧನೆಯನ್ನು ಗುರುತಿಸಲು ನಿರಾಕರಿಸಿತು.

ಇದರ ಪರಿಣಾಮವಾಗಿ, ಡಾ. ಸುಭಾಷ್ ಮುಖೋಪಾಧ್ಯಾಯ ಅವರು ವೈದ್ಯಕೀಯ ವಲಯ ಮತ್ತು ಇಡೀ ದೇಶದಾದ್ಯಂತ ಅಪಹಾಸ್ಯಕ್ಕೆ ಗುರಿಯಾದರು. ತಮ್ಮ ಸಾಧನೆಗೆ ಸಿಕ್ಕ ಅಪಹಾಸ್ಯವನ್ನು ಸಹಿಸಲು ಅಸಾಧ್ಯವಾದ ಡಾ. ಸುಭಾಷ್ ಮುಖೋಪಾಧ್ಯಾಯ ಅವರು 1981ರ ಜೂನ್ 19ರಂದು ಆತ್ಮಹತ್ಯೆ ಮಾಡಿಕೊಂಡರು. ಹೀಗೆ ಅವರ ಅದ್ಭುತ ಆವಿಷ್ಕಾರವೇ ಅವರ ಸಾವಿಗೆ ಕಾರಣವಾಯಿತು.

ಅವರ ನಿಧನದ ಐದು ವರ್ಷಗಳ ನಂತರ, 1986ರ ಆಗಸ್ಟ್ 6 ರಂದು, ಭಾರತದಲ್ಲಿ ಟೆಸ್ಟ್ ಟ್ಯೂಬ್ ನೆರವಿನಿಂದ ಒಂದು ಹೆಣ್ಣು ಮಗು ಜನಿಸಿತು. ಆ ಮಗುವಿಗೆ ‘ಹರ್ಷಾ’ ಎಂದು ಹೆಸರಿಡಲಾಯಿತು. ಹರ್ಷಾ ಅವರನ್ನು ದೇಶದ ಮೊದಲ ಟೆಸ್ಟ್ ಟ್ಯೂಬ್ ಬೇಬಿ ಎಂದು ಗುರುತಿಸಲಾಯಿತು, ಮತ್ತು ಡಾ. ಟಿ.ಸಿ. ಆನಂದ್ ಕುಮಾರ್ ಅವರಿಗೆ ಇದರ ಶ್ರೇಯಸ್ಸು ನೀಡಲಾಯಿತು. ಆದರೆ, ಡಾ. ಆನಂದ್ ಕುಮಾರ್ ಅವರು ಸ್ವತಃ ಶ್ರೇಯಸ್ಸು ತೆಗೆದುಕೊಳ್ಳುವ ಬದಲು, ಡಾ. ಮುಖೋಪಾಧ್ಯಾಯರ ಕೆಲಸವನ್ನು ಗುರುತಿಸಲು ನಿರ್ಧರಿಸಿದರು.

ಡಾ. ಮುಖೋಪಾಧ್ಯಾಯ ಅವರು ತಮ್ಮ ಎಲ್ಲ ಸಂಶೋಧನೆಗಳನ್ನು ಒಂದು ಡೈರಿಯಲ್ಲಿ ದಾಖಲಿಸಿದ್ದರು. ಮುಖೋಪಾಧ್ಯಾಯ ಅವರ ಪತ್ನಿ ಆ ಎಲ್ಲ ಸಂಶೋಧನಾ ದಾಖಲೆಗಳನ್ನು ಡಾ. ಆನಂದ್ ಅವರಿಗೆ ಹಸ್ತಾಂತರಿಸಿದರು. ಆಗ, ದೇಶದ ಮೊದಲ ಟೆಸ್ಟ್ ಟ್ಯೂಬ್ ಬೇಬಿಯನ್ನು ಜನನ ಮಾಡಿಸಿದವರು ಡಾ. ಮುಖೋಪಾಧ್ಯಾಯ ಅವರೇ ಎಂದು ಡಾ. ಆನಂದ್ ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಅಂತಿಮವಾಗಿ, ಡಾ. ಮುಖೋಪಾಧ್ಯಾಯ ಅವರ ಸಾಧನೆಗೆ ಅಂತರರಾಷ್ಟ್ರೀಯ ಮನ್ನಣೆ ದೊರೆಯಿತು.

ಭಾರತದ ಮೊದಲ ಟೆಸ್ಟ್ ಟ್ಯೂಬ್ ಬೇಬಿಯ ನಿಜವಾದ ಹೆಸರು ಕನೂಪ್ರಿಯಾ ಅಗರ್ವಾಲ್. ಪುಣೆಯವರಾದ ಕನೂಪ್ರಿಯಾ ಅವರು ಜನಿಸಿದಾಗ ಅವರಿಗೆ ದುರ್ಗಾ ಎಂದು ಹೆಸರಿಡಲಾಗಿತ್ತು. ಪ್ರಸ್ತುತ ಕನೂಪ್ರಿಯಾ ಅವರು ಸಂಪೂರ್ಣ ಆರೋಗ್ಯವಾಗಿದ್ದು, 10 ವರ್ಷದ ಮಗುವಿನ ತಾಯಿಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read