ರಾಜಸ್ಥಾನದ ಕೋಟಾ ಜಿಲ್ಲೆಯ ದೆಹಲಿ–ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. ಭೋಪಾಲ್ನಿಂದ ರಾಜಸ್ಥಾನದ ಖಾಟು ಶ್ಯಾಮ್ ದೇವಸ್ಥಾನಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಬದಿಯ ಕಂದಕಕ್ಕೆ ಬಿದ್ದಿದೆ.
ಬಸ್ನಲ್ಲಿ ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಒಟ್ಟು 21 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದ್ದು, ಅಪಘಾತದ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ.
ಅಪಘಾತದ ಬಳಿಕ ಗಾಯಾಳುಗಳನ್ನು ಕೋಟಾದ ಎಂ.ಬಿ.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೋಟಾ ಜಿಲ್ಲಾಧಿಕಾರಿ ಪಿಯೂಷ್ ಸಾಮರಿಯಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಘಟನೆಯಲ್ಲಿ 8 ಮಂದಿ ಮೃತಪಟ್ಟಿರುವುದನ್ನು ಜಿಲ್ಲಾಧಿಕಾರಿ ಖಚಿತಪಡಿಸಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯ ಅಡುಗೆಮನೆಯಲ್ಲಿ ಜಿರಳೆ ಪತ್ತೆ! ಮಹಾರಾಷ್ಟ್ರದಲ್ಲಿ 29 ಆಹಾರ ಪರವಾನಗಿಗಳ ಅಮಾನತು
ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ರಾಜ್ಯದ 25 ಆಹಾರ ಸಂಸ್ಥೆಗಳು ಹಾಗೂ ನಾಲ್ಕು ಖಾದ್ಯ ತೈಲ ಮತ್ತು ಮಸಾಲೆ ಉತ್ಪಾದನಾ ಘಟಕಗಳು ಸೇರಿದಂತೆ ಒಟ್ಟು 29 ಸಂಸ್ಥೆಗಳ ಆಹಾರ ಪರವಾನಗಿಗಳನ್ನು ಅಮಾನತುಗೊಳಿಸಿದೆ.
ರಾಜ್ಯದಾದ್ಯಂತ ಹೋಟೆಲ್ಗಳು, ರೆಸ್ಟೋರೆಂಟ್ಗಳು, ಬೇಕರಿಗಳು, ಕ್ಯಾಂಟೀನ್ಗಳು, ಡೈರಿಗಳು ಮತ್ತು ಇತರ ಆಹಾರ ಉತ್ಪಾದನಾ ಘಟಕಗಳಲ್ಲಿ ನಡೆಸಿದ ತಪಾಸಣೆ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ಗಂಭೀರ ಉಲ್ಲಂಘನೆಗಳು ಪತ್ತೆಯಾಗಿವೆ.
ಪರವಾನಗಿ ಅಮಾನತುಗೊಂಡ ಸಂಸ್ಥೆಗಳಲ್ಲಿ ಮುಂಬೈ ಬೈಟ್ಸ್ (ಗಿರ್ಗಾಂವ್), ಸೋಫಿಯಾ ಕಾಲೇಜು ಕ್ಯಾಂಟೀನ್, ಅವೆನ್ಯೂ ಇ-ಕಾಮರ್ಸ್, ಜನತಾ ಬೇಕರಿ (ಜೋಗೇಶ್ವರಿ), ಪಿಎಸ್ಎನ್ ಸಪ್ಲೈ ಚೈನ್ ಸೊಲ್ಯೂಷನ್ಸ್, ಸೋಡೆಕ್ಸೊ ಇಂಡಿಯಾ ಸರ್ವಿಸಸ್ ಮತ್ತು ಅರಿಹಂತ್ ಆಹಾರ್ (ಘಾಟ್ಕೋಪರ್) ಸೇರಿವೆ.
ಫೋರ್ಟಿಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ತಯಾರಿಸುತ್ತಿದ್ದ ಸೋಡೆಕ್ಸೊ ಅಡುಗೆಮನೆಯಲ್ಲಿ ತಪಾಸಣೆ ನಡೆಸಿದಾಗ ಜಿರಳೆಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ, ಚರಂಡಿಯಲ್ಲಿ ಆಹಾರ ತ್ಯಾಜ್ಯ ಸಂಗ್ರಹವಾಗಿರುವುದು, ಆಹಾರ ಸಾಗಣೆಗಾಗಿ ಬಳಸುವ ಪಾತ್ರೆಗಳಲ್ಲಿ ಶಿಲೀಂಧ್ರ ಬೆಳೆದಿರುವುದು ಹಾಗೂ ತುಕ್ಕು ಹಿಡಿದ ಚಾಕುಗಳು ಪತ್ತೆಯಾಗಿವೆ.ಈ ಗಂಭೀರ ನೈರ್ಮಲ್ಯ ಲೋಪಗಳು ಆಹಾರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿವೆ.
ಬೊರಿವಲಿ ಪೂರ್ವದ ಕಾಜು ಪಾಡಾದಲ್ಲಿರುವ ಮನಮಂದಿರ್ ಸ್ವೀಟ್ಸ್ನಲ್ಲಿ ನೋಂದಣಿ ಪ್ರಮಾಣಪತ್ರದಲ್ಲಿ ನಮೂದಿಸಿರುವ ವಿಳಾಸದ ಬದಲು ಬೇರೆ ಸ್ಥಳದಲ್ಲಿ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿತ್ತು ಎಂದು ತಪಾಸಣೆಯಲ್ಲಿ ಪತ್ತೆಯಾಗಿದೆ.ಜೊತೆಗೆ, ನೊಣಗಳ ಕಾಟ, ಸ್ವಚ್ಛವಿಲ್ಲದ ಪಾತ್ರೆಗಳು ಹಾಗೂ ಕಾರ್ಮಿಕರ ವೈದ್ಯಕೀಯ ಪ್ರಮಾಣಪತ್ರಗಳ ಕೊರತೆಯೂ ಕಂಡುಬಂದಿದೆ. ಅಲ್ಲದೆ, ಸಿಬ್ಬಂದಿ ತಯಾರಿಕಾ ಸ್ಥಳದಲ್ಲೇ ವಾಸಿಸುತ್ತಿರುವುದು ಗಮನಕ್ಕೆ ಬಂದಿದೆ.ಈ ಹಿನ್ನೆಲೆಯಲ್ಲಿ ಸಂಸ್ಥೆಯ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

