ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಫರಿದಾಬಾದ್‌ನ 9 ವರ್ಷದ ಬಾಲಕಿ ಶ್ರೇಯೋವಿ ಮೆಹ್ತಾ ಸಾಬೀತುಪಡಿಸಿದ್ದಾರೆ. ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸಿದ್ದ ಪ್ರತಿಷ್ಠಿತ ‘ಬಿಬಿಸಿ ವರ್ಷದ ವನ್ಯಜೀವಿ ಛಾಯಾಗ್ರಾಹಕ’ (WPY) ಸ್ಪರ್ಧೆಯಲ್ಲಿ ಶ್ರೇಯೋವಿ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಈ ಸ್ಪರ್ಧೆಯನ್ನು ಅತ್ಯುನ್ನತ ಗೌರವ ಎಂದು ಪರಿಗಣಿಸಲಾಗುತ್ತದೆ.
ಮನಸೆಳೆದ ‘ಇನ್ ದ ಸ್ಪಾಟ್ ಲೈಟ್’ ಚಿತ್ರ ರಾಜಸ್ಥಾನದ ಕೇವಲಾದೇವ್ ರಾಷ್ಟ್ರೀಯ ಉದ್ಯಾನವನದಲ್ಲಿ ಶ್ರೇಯೋವಿ ಕ್ಲಿಕ್ಕಿಸಿದ “ಇನ್ ದ ಸ್ಪಾಟ್ ಲೈಟ್” ಎಂಬ ಫೋಟೋ ಈ ಪ್ರಶಸ್ತಿಗೆ ಭಾಜನವಾಗಿದೆ. ಮಂಜಿನಿಂದ ಆವೃತವಾದ ಮುಂಜಾನೆಯ ಬೆಳಕಿನಲ್ಲಿ ಎರಡು ನವಿಲುಗಳು ಮರದ ನೆರಳಿನಲ್ಲಿ ನಿಂತಿರುವ ದೃಶ್ಯವನ್ನು ಅವರು ಅತ್ಯಂತ ಸುಂದರವಾಗಿ ಸೆರೆಹಿಡಿದಿದ್ದಾರೆ. 10 ವರ್ಷದೊಳಗಿನವರ ವಿಭಾಗದಲ್ಲಿ 95 ದೇಶಗಳ ಸಾವಿರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ಶ್ರೇಯೋವಿ ಈ ಸಾಧನೆ ಮಾಡಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಕ್ಯಾಮೆರಾ ಪ್ರೀತಿ ತಮ್ಮ ಎರಡನೇ ವಯಸ್ಸಿನಿಂದಲೇ ಪೋಷಕರೊಂದಿಗೆ ವಿವಿಧ ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡುತ್ತಿದ್ದ ಶ್ರೇಯೋವಿ ಅವರಿಗೆ ಪ್ರಕೃತಿ ಮತ್ತು ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ಚಳಿಗಾಲದ ಒಂದು ಮುಂಜಾನೆ ವಾಕಿಂಗ್ ಮಾಡುವಾಗ ನವಿಲುಗಳು ಪೋಸ್ ನೀಡುವಂತೆ ನಿಂತಿರುವುದನ್ನು ಕಂಡ ಶ್ರೇಯೋವಿ, ಕೂಡಲೇ ತಮ್ಮ ತಂದೆಯ ಕ್ಯಾನನ್ ಇಒಎಸ್ ಆರ್5 ಕ್ಯಾಮೆರಾ ತಂದು ನೆಲದ ಮಟ್ಟದಲ್ಲಿ ಕುಳಿತು ಈ ಅದ್ಭುತ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತದ ಮಿಂಚು ಲಂಡನ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಈ ಗೌರವಕ್ಕೆ ಪಾತ್ರರಾಗಿರುವ ಶ್ರೇಯೋವಿ, ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಭಾರತೀಯ ಛಾಯಾಗ್ರಾಹಕಿ ಎಂಬ ದಾಖಲೆ ಬರೆದಿದ್ದಾರೆ. ಇವರ ಈ ಚಿತ್ರವು ಈಗ ಲಂಡನ್‌ನ ಮ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ವಿಶ್ವದಾದ್ಯಂತ ಇರುವ ಬಾಲ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದೆ. ಮಗಳ ಈ ಜಾಗತಿಕ ಸಾಧನೆಗೆ ವನ್ಯಜೀವಿ ತಜ್ಞರಾಗಿರುವ ಅವರ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.


