ಬಾಲಿವುಡ್‌ನಲ್ಲಿ ಸತತ ಯಶಸ್ಸು ಕಾಣುತ್ತಿರುವ ಕೃತಿ ಸನನ್ ಈಗ ದಕ್ಷಿಣ ಭಾರತದತ್ತ ಮುಖ ಮಾಡಿದ್ದಾರೆ. ವಿಜಯ್ ದೇವರಕೊಂಡ ನಾಯಕನಾಗಿ ನಟಿಸಲಿರುವ ಹೊಸ ಪ್ಯಾನ್ ಇಂಡಿಯಾ ಸಿನಿಮಾಗೆ ಕೃತಿ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಚಿತ್ರವು ವಿಜಯ್ ಮತ್ತು ಕೃತಿ ಅವರ ಮೊದಲ ಕಾಂಬಿನೇಷನ್ ಆಗಿರಲಿದ್ದು, ತೆರೆಮೇಲೆ ಹೊಸ ರಸಾಯನಶಾಸ್ತ್ರವನ್ನು ನಿರೀಕ್ಷಿಸಲಾಗಿದೆ.
ಹಾಲಿವುಡ್ ತಂತ್ರಜ್ಞರ ಸಾಥ್ ನಿರ್ದೇಶಕ ಶೌರ್ಯುವ್ ಈ ಸಿನಿಮಾವನ್ನು ಅತ್ಯಂತ ಅದ್ಧೂರಿಯಾಗಿ ನಿರ್ಮಿಸಲು ಯೋಜಿಸಿದ್ದು, ಅಂತರಾಷ್ಟ್ರೀಯ ಮಟ್ಟದ ತಂತ್ರಜ್ಞರನ್ನು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೃತಿ ಸನನ್ ಚಿತ್ರದ ಕಥೆಯನ್ನು ಕೇಳಿದ್ದು, ಚಿತ್ರತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇದು ದ್ವಿಭಾಷಾ ಸಿನಿಮಾವಾಗಿದ್ದು, ಹಾಲಿವುಡ್‌ನ ಖ್ಯಾತ ತಂತ್ರಜ್ಞರು ಈ ಪ್ರಾಜೆಕ್ಟ್‌ನಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ರಶ್ಮಿಕಾ ಮಂದಣ್ಣ ಮತ್ತು ಕೃತಿ ಸ್ನೇಹ ವಿಶೇಷವೆಂದರೆ, ಕೃತಿ ಸನನ್ ಮತ್ತು ವಿಜಯ್ ದೇವರಕೊಂಡ ಪತ್ನಿ ರಶ್ಮಿಕಾ ಮಂದಣ್ಣ ಆತ್ಮೀಯ ಸ್ನೇಹಿತೆಯರು. ಕೃತಿ ಮತ್ತು ರಶ್ಮಿಕಾ ಸದ್ಯ ‘ಕಾಕ್‌ಟೇಲ್ 2’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ಆರತಕ್ಷತೆಯಲ್ಲೂ ಕೃತಿ ಸನನ್ ಭಾಗವಹಿಸಿ ಗಮನ ಸೆಳೆದಿದ್ದರು. ಈಗ ಗೆಳತಿಯ ಪತಿಯ ಜೊತೆಗೇ ಕೃತಿ ತೆರೆಹಂಚಿಕೊಳ್ಳಲು ಸಜ್ಜಾಗುತ್ತಿದ್ದಾರೆ.
ಬಿಡುಗಡೆಗೆ ಸಜ್ಜಾದ ‘ಕಾಕ್‌ಟೇಲ್ 2’ ಮತ್ತೊಂದೆಡೆ, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ಅಭಿನಯದ ‘ಕಾಕ್‌ಟೇಲ್ 2’ ಜೂನ್ 19 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಚಾರ ಕಾರ್ಯಗಳಿಗಾಗಿ ರಶ್ಮಿಕಾ ಮತ್ತು ಕೃತಿ ಶೀಘ್ರದಲ್ಲೇ ಒಂದಾಗಲಿದ್ದಾರೆ. ರಶ್ಮಿಕಾ ಸದ್ಯ ಧನುಷ್ ಅವರ ಹೊಸ ಸಿನಿಮಾ ಮತ್ತು ‘ಮೈಸಾ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡ ಮತ್ತು ಕೃತಿ ಸನನ್ ಸಿನಿಮಾ ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ.

