ದುಬೈ: ಶ್ರೀಮಂತ ಉದ್ಯಮಿಗಳ ಅದ್ದೂರಿ ಜೀವನ ಅಂದ ಕೂಡಲೇ ನೆನಪಾಗುವುದು ಐಷಾರಾಮಿ ಬಂಗಲೆ, ಪ್ರೈವೇಟ್ ಜೆಟ್ ಮತ್ತು ಕೋಟಿ ಬೆಲೆಯ ಕಾರುಗಳು. ಆದರೆ ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿ ಸತೀಶ್ ಸನ್‌ಪಾಲ್ ಅವರ ಹವ್ಯಾಸ ಮಾತ್ರ ತುಸು ವಿಭಿನ್ನ ಮತ್ತು ಅಷ್ಟೇ ಅಚ್ಚರಿಯದ್ದು.ನೆಟ್‌ಫ್ಲಿಕ್ಸ್‌ನ ಹೊಸ ರಿಯಾಲಿಟಿ ಶೋ ‘ದೇಸಿ ಬ್ಲಿಂಗ್’ (Desi Bling) ಮೂಲಕ ಈ ಬಿಲಿಯನೇರ್ ದಂಪತಿಯ ಜೀವನ ಈಗ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ.
ಪತ್ನಿಗೆ ವರ್ಷಕ್ಕೆ 3 ಕೆಜಿ ಚಿನ್ನದ ಉಡುಗೊರೆ
ಈ ಶೋನ ಟ್ರೈಲರ್‌ನಲ್ಲಿ ಸತೀಶ್ ಅವರ ಪತ್ನಿ ತಾಬಿಂದಾ ಸನ್‌ಪಾಲ್ ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ನನ್ನ ಪತಿ ಸತೀಶ್‌ಗೆ ಚಿನ್ನದ ಮೇಲೆ ಎಲ್ಲಿಲ್ಲದ ಪ್ರೀತಿ. ಅವರು ಪ್ರತಿ ವರ್ಷ ನನಗಾಗಿ ತಪ್ಪದೇ 3 ಕೆಜಿ ಚಿನ್ನ ಖರೀದಿಸುತ್ತಾರೆ ಎಂದು ಹೇಳಿದ್ದಾರೆ.
ಇಂದಿನ ಮಾರುಕಟ್ಟೆ ದರದಂತೆ (1 ಕೆಜಿಗೆ ₹1.5 ಕೋಟಿ) ಲೆಕ್ಕ ಹಾಕಿದರೆ, ಈ ಚಿನ್ನದ ಬೆಲೆ ಸುಮಾರು ₹4.5 ಕೋಟಿ ದಾಟುತ್ತದೆ ಅಂದರೆ ಬೆಲೆ ಎಷ್ಟೇ ಇರಲಿ ಪತ್ನಿಗೆ 3 ಕೆಜಿ ಬಂಗಾರ ನೀಡುವುದು ಸತೀಶ್ ಅವರ ವಾರ್ಷಿಕ ಸಂಪ್ರದಾಯವಾಗಿದೆ.
ಮಗಳಿಗೆ ₹10 ಕೋಟಿಯ ರೋಲ್ಸ್ ರಾಯ್ಸ್
ಸತೀಶ್ ಅವರ ಔದಾರ್ಯ ಕೇವಲ ಪತ್ನಿಯ ಮೇಲಷ್ಟೇ ಅಲ್ಲ ಪುಟ್ಟ ಮಗಳ ಮೇಲೂ ಅಷ್ಟೇ ಇದೆ. ಕಳೆದ ವರ್ಷ ತಮ್ಮ ಮಗಳು ಇಸಾಬೆಲ್ಲಾಳ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಸತೀಶ್ ಅವರು ಕಸ್ಟಮೈಸ್ ಮಾಡಿದ ಪಿಂಕ್ ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿ ಇಂಟರ್ನೆಟ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದರು.
https://www.instagram.com/reel/DLKQjO0Jdwx/?utm_source=ig_web_copy_link
ಜಬಲ್‌ಪುರದ ಹುಡುಗ ಈಗ ದುಬೈ ದೊರೆ
ಸತೀಶ್ ಸನ್‌ಪಾಲ್ ಅವರ ಈ ಯಶಸ್ಸಿನ ಹಿಂದೆ ದೊಡ್ಡ ಹೋರಾಟವೇ ಇದೆ.ಮೂಲತಃ ಮಧ್ಯಪ್ರದೇಶದ ಜಬಲ್‌ಪುರದವರಾದ ಸತೀಶ್, ಕೈಯಲ್ಲಿ ಕೇವಲ ₹80,000 ಹಿಡಿದುಕೊಂಡು ದುಬೈಗೆ ಕಾಲಿಟ್ಟಿದ್ದರು.ಇಂದು ಅವರು ಅನಾಕ್ಸ್ ಹೋಲ್ಡಿಂಗ್ (Anax Holding) ಸಂಸ್ಥೆಯ ಅಧ್ಯಕ್ಷರಾಗಿದ್ದು, ರಿಯಲ್ ಎಸ್ಟೇಟ್ ಮತ್ತು ಆತಿಥ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.ಜೀವನದಲ್ಲಿ ಹಣದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿರುವ ಅವರು ಹಣವೇ ದೇವರು ಎಂದಲ್ಲ, ಆದರೆ ಅದು ದೇವರಿಗಿಂತ ಕಡಿಮೆ ಏನೂ ಅಲ್ಲ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು.
ಪ್ರೀತಿಗೆ ಧರ್ಮ ಅಡ್ಡಿಯಾಗಲಿಲ್ಲ
ಬ್ರಿಟಿಷ್ ಪಾಕಿಸ್ತಾನಿ ಮೂಲದ ಮುಸ್ಲಿಂ ಯುವತಿ ತಾಬಿಂದಾ ಮತ್ತು ಹಿಂದೂ ಧರ್ಮದ ಸತೀಶ್ ಅವರ ಮದುವೆಗೆ ಆರಂಭದಲ್ಲಿ ಕುಟುಂಬದ ವಿರೋಧವಿತ್ತು. ಆದರೆ ಸತೀಶ್ ಉದ್ಯಮದಲ್ಲಿ ಬೆಳೆಯುತ್ತಿದ್ದಂತೆ ಎಲ್ಲವೂ ಸುಲಲಿತವಾಯಿತು ಎಂದು ತಾಬಿಂದಾ ನೆನಪಿಸಿಕೊಳ್ಳುತ್ತಾರೆ.
ಸೋಶಿಯಲ್ ಮೀಡಿಯಾ ರಿಯಾಕ್ಷನ್: ತಾಬಿಂದಾ ಅವರ ಈ 3 ಕೆಜಿ ಚಿನ್ನದ ಹೇಳಿಕೆ ಕೇಳಿದ ನೆಟ್ಟಿಗರು ಫಿದಾ ಆಗಿದ್ದಾರೆ. ನಮ್ಮ ಪತಿ ವರ್ಷಕ್ಕೆ ಕನಿಷ್ಠ 4 ಗ್ರಾಂ ಚಿನ್ನ ಕೊಡಿಸಿದರೂ ಸಾಕು ಎಂದು ಅನೇಕ ಮಹಿಳೆಯರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

