ಡೀಪ್’ಫೇಕ್ (Deepfake) ಎಂದರೆ ಕೃತಕ ಬುದ್ಧಿಮತ್ತೆಯನ್ನು (AI) ಬಳಸಿ ಸೃಷ್ಟಿಸಲಾದ ಅತ್ಯಂತ ನೈಜವಾಗಿ ಕಾಣುವ ನಕಲಿ ವಿಡಿಯೋ, ಫೋಟೋ ಅಥವಾ ಆಡಿಯೋಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಇದು ಡಿಜಿಟಲ್ ಜಗತ್ತಿನಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಒಬ್ಬ ವ್ಯಕ್ತಿಯ ಮುಖದ ಚಹರೆ, ಧ್ವನಿ ಮತ್ತು ಹಾವಭಾವಗಳನ್ನು ಎಐ ತಂತ್ರಜ್ಞಾನದ ಮೂಲಕ ಮತ್ತೊಬ್ಬ ವ್ಯಕ್ತಿಯ ದೇಹಕ್ಕೆ ಅಥವಾ ಬೇರೊಂದು ದೃಶ್ಯಕ್ಕೆ ಅಳವಡಿಸಲಾಗುತ್ತದೆ. ಇದು ಎಷ್ಟು ನಿಖರವಾಗಿರುತ್ತದೆ ಎಂದರೆ, ಸಾಮಾನ್ಯ ಕಣ್ಣುಗಳಿಗೆ ಯಾವುದು ಅಸಲಿ ಮತ್ತು ಯಾವುದು ನಕಲಿ ಎಂದು ಗುರುತಿಸುವುದು ಕಷ್ಟವಾಗುತ್ತದೆ.
ಡೀಪ್‌ಫೇಕ್ ಮೂಲಕ ಮಹಿಳೆಯರ ಅಥವಾ ಸೆಲೆಬ್ರಿಟಿಗಳ ಮುಖವನ್ನು ಅಶ್ಲೀಲ ಚಿತ್ರಗಳಿಗೆ ಅಳವಡಿಸಿ ಅವರ ಘನತೆಗೆ ಧಕ್ಕೆ ತರುವುದು. ರಾಜಕಾರಣಿಗಳು ಅಥವಾ ಪ್ರಸಿದ್ಧ ವ್ಯಕ್ತಿಗಳು ಆಡದ ಮಾತುಗಳನ್ನು ಆಡಿದಂತೆ ಬಿಂಬಿಸಿ ಗಲಭೆ ಅಥವಾ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತದೆ.
ಕೃತಕ ಬುದ್ಧಿಮತ್ತೆ (AI) ಮೂಲಕ ಹರಡಲಾಗುತ್ತಿರುವ ಸುಳ್ಳು ಸುದ್ದಿ ಮತ್ತು ಗೊಂದಲಗಳನ್ನು ತಡೆಯಲು ಕೇಂದ್ರ ಸರ್ಕಾರವು ಐಟಿ ನಿಯಮಗಳು 2021ಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಈ ಹೊಸ ನಿಯಮಗಳು ಫೆಬ್ರವರಿ 20 ರಿಂದ ಜಾರಿಗೆ ಬರಲಿವೆ.
ಪ್ರಮುಖ ಮೂರು ಬದಲಾವಣೆಗಳು:
- AI ಲೇಬಲ್ ಕಡ್ಡಾಯ: ಇನ್ನು ಮುಂದೆ ಯೂಟ್ಯೂಬ್, ಫೇಸ್ಬುಕ್ ಮತ್ತು ಎಕ್ಸ್ (ಟ್ವಿಟರ್) ನಂತಹ ಎಲ್ಲಾ ಸಾಮಾಜಿಕ ಮಾಧ್ಯಮಗಳು ಎಐ ಮೂಲಕ ಸಿದ್ಧಪಡಿಸಿದ ಫೋಟೋ ಅಥವಾ ವೀಡಿಯೊಗಳ ಮೇಲೆ ಕಡ್ಡಾಯವಾಗಿ ಲೇಬಲ್ ಹಾಕಬೇಕು. ಒಮ್ಮೆ ಲೇಬಲ್ ಹಾಕಿದ ನಂತರ ಅದನ್ನು ತೆಗೆಯಲು ಅಥವಾ ಮರೆಮಾಡಲು ಅವಕಾಶವಿರುವುದಿಲ್ಲ.
- 3 ಗಂಟೆಯೊಳಗೆ ತೆರವು: ಸರ್ಕಾರ ಅಥವಾ ನ್ಯಾಯಾಲಯದ ಆದೇಶ ಬಂದ ಕೇವಲ 3 ಗಂಟೆಗಳ ಒಳಗೆ ಆಕ್ಷೇಪಾರ್ಹ ಎಐ ಕಂಟೆಂಟ್ ಅಥವಾ ಡೀಪ್ಫೇಕ್ ಫೋಟೋ-ವೀಡಿಯೊಗಳನ್ನು ಪ್ಲಾಟ್ಫಾರ್ಮ್ನಿಂದ ತೆಗೆದುಹಾಕಬೇಕು. ಅಶ್ಲೀಲ ಅಥವಾ ವಂಚನೆಯ ಎಐ ಕಂಟೆಂಟ್ ತಡೆಯಲು ಕಂಪನಿಗಳು ವಿಶೇಷ ತಾಂತ್ರಿಕ ಪರಿಕರಗಳನ್ನು (Tools) ಅಳವಡಿಸಿಕೊಳ್ಳಬೇಕು.
- ಬಳಕೆದಾರರಿಗೆ ಎಚ್ಚರಿಕೆ: ಸಾಮಾಜಿಕ ಮಾಧ್ಯಮ ಕಂಪನಿಗಳು ಪ್ರತಿ 3 ತಿಂಗಳಿಗೊಮ್ಮೆ ತಮ್ಮ ಬಳಕೆದಾರರಿಗೆ ಎಚ್ಚರಿಕೆ ನೀಡಬೇಕು. ಎಐ ಅನ್ನು ದುರುಪಯೋಗಪಡಿಸಿಕೊಂಡರೆ ಶಿಕ್ಷೆ ಅಥವಾ ದಂಡ ವಿಧಿಸಲಾಗುವುದು ಎಂದು ಬಳಕೆದಾರರಿಗೆ ತಿಳಿಸುವುದು ಕಡ್ಡಾಯವಾಗಿದೆ.
ಎಐ ಲೇಬಲ್ ಹೇಗಿರುತ್ತದೆ?
ಎಐ ಸಿದ್ಧಪಡಿಸಿದ ಫೋಟೋ ಅಥವಾ ವೀಡಿಯೊದಲ್ಲಿನ ಕನಿಷ್ಠ 10 ಪ್ರತಿಶತದಷ್ಟು ಭಾಗವನ್ನು ಲೇಬಲ್ ಆವರಿಸಿರಬೇಕು. ಇದರಿಂದ ಜನರು ಅದನ್ನು ಸುಲಭವಾಗಿ ಗುರುತಿಸಬಹುದು.ಒಂದು ವೇಳೆ ಅದು ಎಐ ಧ್ವನಿಯಾಗಿದ್ದರೆ, ಆಡಿಯೋ ಪ್ಲೇ ಆಗುವ ಮೊದಲೇ ಇದು ‘ಎಐ ಧ್ವನಿ’ ಎಂಬ ಸೂಚನೆ ಕೇಳಿಸಬೇಕು.ಕಂಪನಿಗಳು ಲೇಬಲ್ ಅನ್ನು ಮರೆಮಾಚುವಂತಿಲ್ಲ. ವೀಡಿಯೊ ಅಪ್ಲೋಡ್ ಆಗುವ ಮೊದಲೇ ಅದು ಎಐ ಕಂಟೆಂಟ್ ಹೌದೇ ಎಂದು ಪತ್ತೆಹಚ್ಚುವ ತಂತ್ರಜ್ಞಾನವನ್ನು ಕಂಪನಿಗಳು ಹೊಂದಿರಬೇಕು.
ಸಾಮಾನ್ಯ ಜನರಿಗೆ ಆಗುವ ಲಾಭಗಳೇನು?
• ಜನರು ಯಾವುದು ಅಸಲಿ ಮತ್ತು ಯಾವುದು ಎಐ ಸೃಷ್ಟಿತ ಎಂಬ ವ್ಯತ್ಯಾಸವನ್ನು ಸುಲಭವಾಗಿ ತಿಳಿಯಬಹುದು.
• ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವಂತಹ ಅಥವಾ ನಕಲಿ ಸೆಲೆಬ್ರಿಟಿ ವೀಡಿಯೊಗಳ ಮೂಲಕ ಹರಡುವ ತಪ್ಪು ಮಾಹಿತಿಗಳಿಗೆ ಬ್ರೇಕ್ ಬೀಳಲಿದೆ.
• ಇಂಟರ್ನೆಟ್ ಬಳಕೆ ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಲಿದೆ.
ಈ ಹೊಸ ಆದೇಶವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಕಾಣಲಿರುವ ಬದಲಾವಣೆಗಳು
• ಸ್ಪಷ್ಟ ಗುರುತಿಸುವಿಕೆ: ನೀವು ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ನಲ್ಲಿ ಸ್ಕ್ರೋಲ್ ಮಾಡುವಾಗ, ಕೃತಕವಾಗಿ ಸೃಷ್ಟಿಸಿದ ಚಿತ್ರಗಳ ಮೇಲೆ ಇನ್ನು ಮುಂದೆ “Generated by AI” ಅಥವಾ “AI-assisted” ಎಂಬ ವಾಟರ್ಮಾರ್ಕ್ ಅಥವಾ ಲೇಬಲ್ ಕಾಣಸಿಗುತ್ತದೆ.
• ತ್ವರಿತ ಕ್ರಮ: ಯಾರಾದರೂ ನಿಮ್ಮ ಹೆಸರಿನಲ್ಲಿ ಅಥವಾ ಬೇರೆಯವರ ಹೆಸರಿನಲ್ಲಿ ‘ಡೀಪ್ಫೇಕ್’ (Deepfake) ವೀಡಿಯೊ ಹರಡಿದರೆ, ಅದರ ವಿರುದ್ಧ ದೂರು ನೀಡಿದ ಕೇವಲ 3 ಗಂಟೆಗಳಲ್ಲಿ ಅದನ್ನು ತೆಗೆದುಹಾಕುವ ಜವಾಬ್ದಾರಿ ಕಂಪನಿಗಳ ಮೇಲಿರುತ್ತದೆ. ಇದು ಈ ಹಿಂದೆ 24 ರಿಂದ 72 ಗಂಟೆಗಳವರೆಗೆ ತೆಗೆದುಕೊಳ್ಳುತ್ತಿತ್ತು.
• ಸುರಕ್ಷಿತ ಆಡಿಯೋ: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಧ್ವನಿಯನ್ನು ಬಳಸಿ ನಕಲಿ ಹಾಡು ಅಥವಾ ಭಾಷಣಗಳನ್ನು ಮಾಡಲಾಗುತ್ತಿದೆ. ಹೊಸ ನಿಯಮದಂತೆ, ಅಂತಹ ಆಡಿಯೋ ಪ್ರಾರಂಭವಾಗುವ ಮೊದಲೇ ಇದು ‘AI ಧ್ವನಿ’ ಎಂಬ ಎಚ್ಚರಿಕೆ ಬರಲಿದೆ.

