ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಗುಂತಕೋಲಮ್ಮನಹಳ್ಳಿಯ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 790 ಗಾಂಜಾ ಗಿಡಗಳನ್ನು ಜಪ್ತಿ ಮಾಡಲಾಗಿದೆ.
ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿ ಪಾಲಯ್ಯ(55) ನನ್ನು ಬಂಧಿಸಲಾಗಿದೆ. ಈತ ಜಮೀನಿನಲ್ಲಿ ಮೆಕ್ಕೆಜೋಳದ ನಡುವೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ನಾಯಕನಹಟ್ಟಿ ಠಾಣೆ ಪೋಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 187 ಕೆಜಿ ಗಾಂಜಾ ಸೊಪ್ಪು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 18 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಪಾಲಯ್ಯ ಜಮೀನಿನಲ್ಲಿ ಗಾಂಜಾ ಗಿಡ ಬೆಳೆದ ಮಾಹಿತಿ ಪಡೆದ ಪೊಲೀಸರು ಸಿಪಿಐ ಹನುಮಂತಪ್ಪ, ಪಿಎಸ್ಐ ಪಾಂಡುರಂಗ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಆರೋಪಿ ಪಾಲಯ್ಯನನ್ನು ಬಂಧಿಸಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

