ಬೆಂಗಳೂರು: ತಟ್ಟಿಕೆರೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಮುಂದಾಗಿದ್ದ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಆನೇಕಲ್ ವಲಯ ಅರಣ್ಯಾಧಿಕಾರಿಗಳ ತಂಡದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಸ್ಕಾರ್ಪಿಯೋ ವಾಹನದಲ್ಲಿ ಆರೋಪಿಗಳು ಬೇಟೆಯಾಡಲು ಬಂದಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾರ್ ಸಮೇತ ವನ್ಯಜೀವಿಗಳ ಬೇಟೆಯಾಡಲು ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ 7 ಜನರ ಪೈಕಿ ನಾಲ್ವರು ಯಾದಗಿರಿ ಮೂಲದವರಾಗಿದ್ದಾರೆ. ಉಳಿದ ಮೂವರು ಕನಕಪುರ ಮತ್ತು ಹಾರೋಹಳ್ಳಿ ನಿವಾಸಿಗಳಾಗಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಅರಣ್ಯಾಧಿಕಾರಿಗಳು ಒಪ್ಪಿಸಿದ್ದಾರೆ.

