HomeKarnataka21 ವರ್ಷದ ಮೊಮ್ಮಗಳಿಗೆ ಮೂತ್ರಪಿಂಡ ದಾನ ಮಾಡಿದ 65 ವರ್ಷದ ಅಜ್ಜಿ: ವಿಭಿನ್ನ ರಕ್ತ ಗುಂಪಿನ...

21 ವರ್ಷದ ಮೊಮ್ಮಗಳಿಗೆ ಮೂತ್ರಪಿಂಡ ದಾನ ಮಾಡಿದ 65 ವರ್ಷದ ಅಜ್ಜಿ: ವಿಭಿನ್ನ ರಕ್ತ ಗುಂಪಿನ ಯುವತಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಯಶಸ್ವಿ

ಶಿವಮೊಗ್ಗ: ಶಿವಮೊಗ್ಗದ ಎನ್‌ಯು ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ರಕ್ತದ ಗುಂಪಿನ ವ್ಯಕ್ತಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್(ಮೂತ್ರಪಿಂಡ ಕಸಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ. ಪ್ರವೀಣ್ ಮಾಳವದೆ ಹೇಳಿದ್ದಾರೆ.

ಅವರು ಇಂದು ಮಾಚೇನಹಳ್ಳಿಯಲ್ಲಿರುವ ಎನ್‌ಯು ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಭಿನ್ನ ರಕ್ತದ ಗುಂಪಿನ ವ್ಯಕ್ತಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್(ಮೂತ್ರಪಿಂಡ ಕಸಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ನಾವು ಮಹತ್ತರ ಸಾಧನೆಯನ್ನು ಮಾಡಿದ್ದೇವೆ. ಇದು ಮಲೆನಾಡು ಭಾಗದಲ್ಲಿಯೇ ಪ್ರಥಮವಾಗಿದ್ದು, ಮೂತ್ರ ಪಿಂಡ ಸಂಬಂಧಿತ ಕಾಯಿಲೆಗಳ ರೋಗಿಗಳಿಗೆ ಭರವಸೆ ಮೂಡಿಸಿದೆ ಎಂದರು.

65 ವರ್ಷ ವಯಸ್ಸಿನ ಅಜ್ಜಿ 21 ವರ್ಷದ ಮೊಮ್ಮಗಳಿಗೆ ತನ್ನ ಮೂತ್ರಪಿಂಡವನ್ನು ದಾನ ಮಾಡಿದ್ದಾರೆ. ಈ ಪ್ರಕರಣದಲ್ಲಿ ಎನ್‌ಯು ಆಸ್ಪತ್ರೆಯ ಹೆಗ್ಗಳಿಕೆಯೆಂದರೆ ದಾನಿಯ ಹಾಗೂ ರೋಗಿಯ ರಕ್ತದ ಗುಂಪು ಬೇರೆ ಬೇರೆಯಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿ ನವೀನ ತಂತ್ರಜ್ಞಾನಗಳನ್ನು ಬಳಸಿ ಚಿಕಿತ್ಸೆಯನ್ನು ಎನ್‌ಯು ಆಸ್ಪತ್ರೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವತಿಯು(ರೋಗಿ) ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಳು. ಮೇ 2023ರಲ್ಲಿ ಆಕೆಗೆ ಕಿಡ್ನಿ ಸಮಸ್ಯೆ ಇರುವುದನ್ನು ವೈದ್ಯರು ದೃಢಪಡಿಸಿದ್ದರು. ಆಕೆಗೆ 2023ರ ಡಿಸೆಂಬರ್ ನಲ್ಲಿ ಡಯಾಲಿಸಿಸ್ ಪ್ರಕ್ರಿಯೆಯನ್ನು ವೈದ್ಯರು ಪ್ರಾರಂಭಿಸಿದ್ದಾರೆ. ರೋಗಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಇದನ್ನು ಮನಗಂಡ ಆಕೆಯ ಅಜ್ಜಿ ಕಿಡ್ನಿ ನೀಡಲು ಮುಂದಾದರು. ಅಜ್ಜಿ ಹಾಗೂ ಮೊಮ್ಮಗಳು ಇಬ್ಬರೂ ವಿಭಿನ್ನ ರಕ್ತದ ಗುಂಪನ್ನು ಹೊಂದಿದ್ದರೂ ಕೂಡ ಹಲವಾರು ಸವಾಲುಗಳ ನಡುವೆಯೇ ಚಿಕಿತ್ಸೆಯನ್ನು 2024ರ ಏಪ್ರಿಲ್‌ನಲ್ಲಿ ಕೈಗೊಳ್ಳಲಾಯಿತು ಎಂದರು.

ಈ ಶಸ್ತ್ರ ಚಿಕಿತ್ಸೆಗೆ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಪ್ರದೀಪ್ ಎಂ.ಜಿ., ಡಾ.ಕಾರ್ತಿಕ್, ಡಾ.ಅನುಷಾ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಗಳು, ಶಸ್ತ್ರ ಚಿಕಿತ್ಸೆಯ ನಂತರ ಇಬ್ಬರು ಕೂಡ ಆರೋಗ್ಯವಾಗಿದ್ದು, ಮೂತ್ರಪಿಂಡವು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

ಶಸ್ತ್ರಚಿಕಿತ್ಸೆಯನ್ನು ಹೊರತುಪಡಿಸಿದರೆ ಈ ಪ್ರಕರಣ ಒಂದು ಕೌಟುಂಬಿಕ ಪ್ರೀತಿ, ಪರಸ್ಪರ ವಿಶ್ವಾಸವನ್ನು ಮೂಡಿಸುತ್ತಿದೆ. ದಾನಿಗಳನ್ನು ಕೂಡ ಪ್ರೇರೆಪಿಸುತ್ತದೆ. ಎಷ್ಟೋ ಜನರು ರಕ್ತದ ಗುಂಪು ಬೇರೆಯಾದರೇ ದಾನಮಾಡಲು ಬರುವುದಿಲ್ಲ ಎಂದು ತಿಳಿದುಕೊಂಡಿದ್ದರು. ಆದರೆ ಈಗ ಅದು ಬದಲಾಗಿದೆ. ಹೊಸ ತಂತ್ರಜ್ಞಾನಗಳು ಹಲವು ಜೀವಗಳನ್ನು ಉಳಿಸುತ್ತವೆ ಎಂದರು.

ಹೆಚ್ಚಿನ ಮಾಹಿತಿಗಾಗಿ 6364409651, 6364466240 ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಅರವಳಿಕೆ ತಜ್ಞ ಡಾ.ಕಾರ್ತಿಕ್, ಶಸ್ತ್ರ ಚಿಕಿತ್ಸಾ ತಜ್ಞ ಡಾ.ಪ್ರದೀಪ್, ಡಾ.ಅನುಷಾ ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular