ಪ್ರಮುಖ ಡ್ರಗ್ಸ್ ಸಿಂಡಿಕೇಟ್‌ನ ಕಿಂಗ್‌ಪಿನ್ ವೀರೇಂದ್ರ ಬೈಸೋಯಾನನ್ನು ದುಬೈನಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ₹6,000 ಕೋಟಿ ಮೌಲ್ಯದ ಪುಣೆ ಡ್ರಗ್ಸ್ ಪ್ರಕರಣದಲ್ಲಿ ಆತ ಆರೋಪಿಯಾಗಿದ್ದು, ಆತನ ವಿರುದ್ಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.
ಬೈಸೋಯಾನನ್ನು ಏರ್ ಇಂಡಿಯಾ ವಿಮಾನ ಸಂಖ್ಯೆ 4310 ಮೂಲಕ ಭಾರತಕ್ಕೆ ಕರೆತರಲಾಗಿದೆ. ದುಬೈನಲ್ಲಿ ಆತನನ್ನು ಬಂಧಿಸಿ, ಭಾರತ ಸರ್ಕಾರದ ಪ್ರಯತ್ನದ ಬಳಿಕ ಗಡೀಪಾರು ಮಾಡಲಾಗಿದೆ.ಮಾಹಿತಿಯ ಪ್ರಕಾರ, ಬೈಸೋಯಾ ಸಂದೀಪ್ ಧುನಿಯಾನ ಆಪ್ತ ಸಹಚರನಾಗಿದ್ದಾನೆ. ₹13,000 ಕೋಟಿ ಮೌಲ್ಯದ ದೊಡ್ಡ ಡ್ರಗ್ಸ್ ಪ್ರಕರಣದಲ್ಲಿ ಧುನಿಯಾ ಪ್ರಮುಖ ಆರೋಪಿಯಾಗಿದ್ದು, ಆತ ದುಬೈನಿಂದ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.ಬೈಸೋಯಾನನ್ನು ಭಾರತಕ್ಕೆ ಕರೆತಂದಿರುವುದು ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರಕ್ಕೆ ಪ್ರಮುಖ ಯಶಸ್ಸು ಎಂದು ಪರಿಗಣಿಸಲಾಗಿದೆ.
‘ಕಠಿಣ ಕ್ರಮ’ದ ಎಚ್ಚರಿಕೆ
ವಿದೇಶಗಳಲ್ಲಿ ಅಡಗಿರುವ ಡ್ರಗ್ಸ್ ಕಳ್ಳಸಾಗಣೆದಾರರನ್ನು ಪತ್ತೆಹಚ್ಚಿ, ಅವರ ಜಾಲವನ್ನು ಸಂಪೂರ್ಣವಾಗಿ ನಾಶಪಡಿಸಲು ಸರ್ಕಾರ ‘ಕಠಿಣ ಕ್ರಮ’ ಕೈಗೊಳ್ಳುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಯುಎಇಯಿಂದ ಪರಾರಿಯಾಗಿದ್ದ ಡ್ರಗ್ಸ್ ಕಿಂಗ್‌ಪಿನ್ ವೀರೇಂದ್ರ ಸಿಂಗ್ ಬೈಸೋಯಾನನ್ನು ಭಾರತಕ್ಕೆ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದೆ. ಇದು ಮಾದಕ ವಸ್ತುಗಳ ವಿರುದ್ಧ ಸರ್ಕಾರ ಅನುಸರಿಸುತ್ತಿರುವ ‘ಶೂನ್ಯ ಸಹಿಷ್ಣುತೆ’ ನೀತಿಯ ಮತ್ತೊಂದು ಮಹತ್ವದ ಮೈಲಿಗಲ್ಲು ಎಂದು ಹೇಳಿದ್ದಾರೆ.
ಭಾರತೀಯ ತನಿಖಾ ಸಂಸ್ಥೆಗಳು ‘ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ’ ಎಂಬ ಎರಡೂ ರೀತಿಯ ತನಿಖಾ ವಿಧಾನಗಳನ್ನು ಬಳಸಿಕೊಂಡು ಬೈಸೋಯಾನನ್ನು ಪತ್ತೆಹಚ್ಚಿವೆ. ಡ್ರಗ್ಸ್ ಕಳ್ಳಸಾಗಣೆದಾರರು ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿಕೊಂಡರೂ ಭಾರತೀಯ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಎಚ್ಚರಿಸಿದ್ದಾರೆ.

