ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್ ಹೆದ್ದಾರಿಯಲ್ಲಿ ಹಿಮಪಾತ ಸಂಭವಿಸಿ 6 ಜನರು ಸಾವನ್ನಪ್ಪಿದ್ದಾರೆ. 5 ಜನರಿಗೆ ಗಾಯಗಳಾಗಿವೆ.
ಶುಕ್ರವಾರ ಜೋಜಿಲ್ಲಾ-ಸೋನಾಮಾರ್ಗ್ ಹೆದ್ದಾರಿಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸುಮಾರು ಒಂದು ಡಜನ್ ವಾಹನಗಳನ್ನು ಮುಚ್ಚಿ ಹೋಗಿವೆ. ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಐದು ಜನರು ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಲಡಾಖ್ ನ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
“ಜೋಜಿ ಲಾದಲ್ಲಿ ಹಿಮಪಾತದ ದುರದೃಷ್ಟಕರ ಸುದ್ದಿ ಕೇಳಿದೆ. ಕಾರ್ಗಿಲ್‌ನ ಡಿಸಿ ಮತ್ತು ಎಸ್‌ಎಸ್‌ಪಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಸಜ್ಜುಗೊಳಿಸುವಂತೆ ನಾನು ನಿರ್ದೇಶಿಸಿದ್ದೇನೆ. ವಿಪತ್ತು ಪರಿಹಾರ ಪಡೆಗಳು ಮತ್ತು ಬಿಆರ್‌ಒ ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ನಾನು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

