ಬೆಂಗಳೂರು: ರಾಜ್ಯದ ಅರ್ಹ 50 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮೋದನೆ ನೀಡಿದೆ.
ಪ್ರೌಢಶಾಲೆಗಳ ಉನ್ನತಿಕರಣವನ್ನು ಕಳೆದ ವರ್ಷದ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಅಂತೆಯೇ ಶಾಲಾ ಶಿಕ್ಷಣ ಇಲಾಖೆ ಪ್ರೌಢಶಾಲೆಗಳ ಉನ್ನತೀಕರಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
15 ಕಿಲೋಮೀಟರ್ ವ್ಯಾಪ್ತಿಯೊಳಗೆ ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಿಲ್ಲದಿದ್ದಲ್ಲಿ ಹಾಗೂ 10ನೇ ತರಗತಿಯಲ್ಲಿ ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆ 40ಕ್ಕಿಂತ ಕಡಿಮೆ ಇಲ್ಲದ ಪ್ರೌಢಶಾಲೆಗಳನ್ನು ಮಾತ್ರ ಉನ್ನತೀಕರಿಸಿ ಪ್ರಾರಂಭಿಸುವುದು. ಕೆಕೆಆರ್ಡಿಬಿ ವತಿಯಿಂದ 14 ಸರ್ಕಾರಿ ಪ್ರೌಢಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಉನ್ನತೀಕರಿಸಲು ಅನುದಾನ ಒದಗಿಸುವ ಕಾಲಾವಧಿ ಮುಗಿದ ನಂತರ ಈ ಕಾಲೇಜು ಮುಂದುವರೆಸುವ ಅಗತ್ಯವಿರುವ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ.

