ಮುಂಬೈ: ಆಧುನಿಕ ಜೀವನದ ಜಂಜಾಟದಲ್ಲಿ ಮನುಷ್ಯ ಎಷ್ಟು ಒಂಟಿಯಾಗಿದ್ದಾನೆ ಎಂಬುದಕ್ಕೆ ಮುಂಬೈನ ಜುಹು ಬೀಚ್‌ನಲ್ಲಿ ಕಂಡುಬಂದ ಈ ದೃಶ್ಯವೇ ಸಾಕ್ಷಿ! ಜನರ ಮಾನಸಿಕ ಒತ್ತಡ ಮತ್ತು ಏಕಾಂತವನ್ನೇ ಬಂಡವಾಳವಾಗಿಸಿಕೊಂಡ ವ್ಯಕ್ತಿಯೊಬ್ಬರು, ಜನರ ಕಷ್ಟಗಳನ್ನು ಕೇಳಿಸಿಕೊಳ್ಳಲು ಶುಲ್ಕ ನಿಗದಿಪಡಿಸುವ ಮೂಲಕ ಇಂಟರ್ನೆಟ್‌ನಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.
ಹೌದು. ಆಧುನಿಕ ಜೀವನದ ಜಂಜಾಟದಲ್ಲಿ ಜನರ ಏಕಾಂತ ಮತ್ತು ಮಾನಸಿಕ ಒತ್ತಡವನ್ನೇ ಬಂಡವಾಳವಾಗಿಸಿಕೊಂಡ ವ್ಯಕ್ತಿಯೊಬ್ಬರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮುಂಬೈನ ಜುಹು ಬೀಚ್‌ನಲ್ಲಿ ಕುಳಿತು ಜನರ ನೋವು-ನಲಿವುಗಳನ್ನು ಕೇಳಿಸಿಕೊಳ್ಳುವ ಈ ವ್ಯಕ್ತಿ, ಅದಕ್ಕಾಗಿ ನಿಗದಿತ ಮೊತ್ತವನ್ನು ಶುಲ್ಕವಾಗಿ ಪಡೆಯುತ್ತಿದ್ದಾರೆ!
ಕೇವಲ ₹250 ರಿಂದ ₹1,000 ವರೆಗೆ ಹಣ ಪಡೆದು ಜನರ ನೋವು-ನಲಿವುಗಳಿಗೆ ಕಿವಿಯಾಗುವ ಈ ‘ಪೇಯ್ಡ್ ಲಿಸನಿಂಗ್’ ಸೇವೆ, ನಗರವಾಸಿಗಳ ಮಾನಸಿಕ ಆರೋಗ್ಯ ಮತ್ತು ಒಂಟಿತನದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರೂ ಈ ವಿಡಿಯೋ ಹಂಚಿಕೊಂಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪ್ರತಿ ಭಾವನೆಗೂ ಒಂದು ಬೆಲೆ !
ಮುಂಬೈನ ಅಂಧೇರಿ ನಿವಾಸಿ ಪೃಥ್ವಿ ರಾಜ್‌ಪೋಹ್ಲಾ ಎಂಬುವವರೇ ಈ ವಿಶಿಷ್ಟ ಸೇವೆ ನೀಡುತ್ತಿರುವ ವ್ಯಕ್ತಿ. ಬೀಚ್‌ನಲ್ಲಿ ಒಂದು ಬೋರ್ಡ್ ಹಿಡಿದು ಕುಳಿತುಕೊಳ್ಳುವ ಇವರು, ದಾರಿಹೋಕರ ಸಂಕಷ್ಟಗಳನ್ನು ಕೇಳಿಸಿಕೊಳ್ಳುತ್ತಾರೆ. ಇವರ ‘ದರ ಪಟ್ಟಿ’ ಹೀಗಿದೆ:
- ಸಣ್ಣಪುಟ್ಟ ಸಮಸ್ಯೆಗಳ ಆಲಿಕೆಗೆ: ₹250
- ದೊಡ್ಡ ಮಟ್ಟದ ಚಿಂತೆಗಳಿದ್ದರೆ: ₹500
- ನಿಮ್ಮ ಜೊತೆ ಕುಳಿತು ಕಣ್ಣೀರು ಹಾಕಲು (ಅಳಲು): ₹1,000
ಕೇವಲ ಹರಟೆಯಲ್ಲ, ಇದೊಂದು ಮಾರ್ಗದರ್ಶನ!
ಪೃಥ್ವಿ ಅವರ ಪ್ರಕಾರ, ಇದು ಬರೀ ಮಾತುಕತೆಯಲ್ಲ. ಜನರು ತಮ್ಮ ಮನಸ್ಸಿನ ಭಾರ ಇಳಿಸಿಕೊಳ್ಳಲು ಇವರನ್ನು ಸಂಪರ್ಕಿಸುತ್ತಾರೆ. ಗೊಂದಲದಲ್ಲಿರುವವರಿಗೆ ದಾರಿ ತೋರಿಸುವುದು ಮತ್ತು ಅವರ ಆಲೋಚನೆಗಳನ್ನು ಸ್ಪಷ್ಟಪಡಿಸಿಕೊಳ್ಳಲು ಸಹಾಯ ಮಾಡುವುದು ತಮ್ಮ ಉದ್ದೇಶ ಎಂದು ಅವರು ಹೇಳಿಕೊಂಡಿದ್ದಾರೆ. ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಈ ವ್ಯಕ್ತಿ ಏನು ಮಾಡುತ್ತಿದ್ದಾನೆಂದು ನೀವು ಊಹಿಸಲೂ ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರ ಅಭಿಪ್ರಾಯವೇನು..?
ಮುಂಬೈನಂತಹ ವೇಗವಾಗಿ ಓಡುವ ನಗರಗಳಲ್ಲಿ ಮನುಷ್ಯ ಇಂದು ಎಷ್ಟು ಒಂಟಿಯಾಗಿದ್ದಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹಣ ನೀಡಿಯಾದರೂ ತಮ್ಮ ಮನದ ಮಾತನ್ನು ಕೇಳಿಸಿಕೊಳ್ಳಲು ಒಬ್ಬರು ಬೇಕು ಎಂಬ ಜನರ ಹಂಬಲವು ಮಾನಸಿಕ ಆರೋಗ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕೆಲವರು ಇದನ್ನು ತಮಾಷೆಯಾಗಿ ನೋಡಿದರೆ, ಇನ್ನು ಕೆಲವರು ಇದು ನಗರ ಜೀವನದ ವಿಷಾದನೀಯ ಸ್ಥಿತಿ ಎಂದು ಅಭಿಪ್ರಾಯಪಟ್ಟಿದ್ದಾರೆ.
· ಇದು ನಗುವ ವಿಷಯವಲ್ಲ”: “ನಮ್ಮ ನಗರಗಳಲ್ಲಿ ಜನರು ಎಷ್ಟು ಒಂಟಿಯಾಗಿದ್ದಾರೆ ಎಂಬುದಕ್ಕೆ ಇದೊಂದು ಕನ್ನಡಿ. ಮಾತನಾಡಲು ಒಬ್ಬರು ಬೇಕು ಎನ್ನುವುದಕ್ಕಾಗಿ ಹಣ ನೀಡುವ ಸ್ಥಿತಿ ಬಂದಿರುವುದು ನಿಜಕ್ಕೂ ಬೇಸರದ ಸಂಗತಿ,” ಎಂದು ಒಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
· “ಮನಃಶಾಸ್ತ್ರಜ್ಞರಿಗಿಂತ ಅಗ್ಗ”: “ಥೆರಪಿಸ್ಟ್‌ಗಳ ಬಳಿ ಹೋಗಿ ಸಾವಿರಾರು ರೂಪಾಯಿ ಸುರಿಯುವ ಬದಲು, ಬೀಚ್‌ನಲ್ಲಿ ಕುಳಿತು ಮನಸ್ಸಿನ ಭಾರ ಇಳಿಸಿಕೊಳ್ಳುವುದು ಅಗ್ಗದ ಉಪಾಯ” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

