ಭಾರತೀಯ ಚಿತ್ರರಂಗದ ದೈತ್ಯ ನಿರ್ದೇಶಕ ಎಸ್‌ಎಸ್ ರಾಜಮೌಳಿ ಹಾಗೂ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ವಾರಣಾಸಿ’ ಬಿಡುಗಡೆ ದಿನಾಂಕದ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಈಗ ತೆರೆಬಿದ್ದಿದೆ. ಈ ಸಿನಿಮಾ ನಿಗದಿತ ಸಮಯಕ್ಕಿಂತ ತಡವಾಗಿ ಚಿತ್ರಮಂದಿರಗಳಿಗೆ ಬರಲಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಆದರೆ ಚಿತ್ರತಂಡದ ಮೂಲಗಳ ಪ್ರಕಾರ, ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
2027ರ ಏಪ್ರಿಲ್ 7 ರಂದು ಈ ಬಹುಕೋಟಿ ವೆಚ್ಚದ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದ್ದು, ಚಿತ್ರ ಬಿಡುಗಡೆಗೆ ಇನ್ನು ಸರಿಯಾಗಿ 250 ದಿನಗಳು ಬಾಕಿ ಇವೆ. ಚಿತ್ರದ ಚಿತ್ರೀಕರಣ ಮತ್ತು ಪ್ರೊಡಕ್ಷನ್ ಕೆಲಸಗಳು ಯೋಜನೆಯಂತೆಯೇ ವೇಗವಾಗಿ ಮುನ್ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ರಿಲೀಸ್ ದಿನಾಂಕ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಮಹೇಶ್ ಬಾಬು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಸಾಹಸಮಯ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಅಪ್‌ಡೇಟ್‌ಗಳನ್ನು ನೀಡಲು ನಿರ್ಮಾಣ ಸಂಸ್ಥೆ ಯೋಜನೆ ರೂಪಿಸಿದೆ.

