2025 ಮುಗಿಯುತ್ತಾ ಬಂದಿದೆ. ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಜನರು ತಯಾರಿ ನಡೆಸಿದ್ದಾರೆ. ಈ ವರ್ಷ ಭಾರತ, ವಿದೇಶದಲ್ಲಿ ಹಲವಾರು ರಾಜಕೀಯ ವಿದ್ಯಮಾನಗಳು ನಡೆದಿವೆ. ಜೆನ್-ಝಿಗಳ ಹೋರಾಟ ರಾಷ್ಟ್ರದ ಅಧಿಕಾರವನ್ನು ಬದಲಾವಣೆ ಮಾಡುವ ಮಟ್ಟಿಗೆ ಪ್ರಭಾವವನ್ನು ಬೀರಿದೆ.
ಭಾರತದ ಅಕ್ಕಪಕ್ಕದ ರಾಷ್ಟ್ರಗಳಲ್ಲಿ 2025ರಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಅಮೆರಿಕದ ಅಧಿಕಾರ ಮತ್ತೆ ಡೊನಾಲ್ಡ್ ಟ್ರಂಪ್ ಕೈ ಸೇರಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿಯ ಬಗ್ಗೆ ವಿವಿಧ ರಾಷ್ಟ್ರಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
2025ರಲ್ಲಿ ವಿವಿಧ ದೇಶಗಳಲ್ಲಿ ನಡೆದ ಪ್ರಮುಖ ರಾಜಕೀಯ ಬೆಳವಣಿಗೆ ಕುರಿತ ಮಾಹಿತಿ ಇಲ್ಲಿದೆ. ಈ ಬೆಳವಣಿಗೆ ನೇರವಾಗಿ ಭಾರತದ ಮೇಲೆ ಪರಿಣಾಮ ಬೀರದಿದ್ದರೂ ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗ ಭಾರತದ ಮೇಲೆ ಪರೋಕ್ಷಣ ಪರಿಣಾಮವನ್ನು ಉಂಟು ಮಾಡಿದೆ.
ಅಮೆರಿಕದಲ್ಲಿ ಮತ್ತೆ ಟ್ರಂಪ್ ಅಧಿಕಾರ: ಅಮೆರಿಕ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅಧಿಕಾರವನ್ನು ವಹಿಸಿಕೊಂಡರು. 2025ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ 2ನೇ ಬಾರಿಗೆ ಟ್ರಂಪ್ ಅಮೆರಿಕದ ಅಧ್ಯಕ್ಷರಾದರು.
ಅಧಿಕಾರವಹಿಸಿಕೊಳ್ಳುತ್ತಲೇ ಟ್ರಂಪ್ ಸುಂಕದ ಮೂಲಕ ವಿವಿಧ ರಾಷ್ಟ್ರಗಳಿಗೆ ಟ್ರಂಪ್ ತಲೆನೋವು ತಂದಿದ್ದಾರೆ. ಅಮೆರಿಕ ಮೊದಲು ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಟ್ರಂಪ್ ಸ್ಥಳೀಯರ ಹಿತಾಸಕ್ತಿಗೆ ಮೊದಲ ಆದ್ಯತೆಯನ್ನು ನೀಡುತ್ತಿದ್ದಾರೆ.
ಮಾರ್ಕ್ ಕ್ಯಾರ್ನಿ ಕೆನಡಾದ ಪ್ರಧಾನಿ: ಅಮೆರಿಕ ಪಕ್ಕದ ಕೆನಡಾದಲ್ಲಿಯೂ ರಾಜಕೀಯ ಬೆಳವಣಿಗೆ 2025ರ ಮಾರ್ಚ್‌ನಲ್ಲಿ ನಡೆಯಿತು. ದೇಶದ ನೂತನ ಪ್ರಧಾನಿಯಾಗಿ ಲಿಬರಲ್ ಪಕ್ಷದ ನಾಯಕ ಮಾರ್ಕ್ ಕ್ಯಾರ್ನಿ ಆಯ್ಕೆಯಾದರು. 10 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದ ಜಸ್ಟಿನ್ ಟ್ರೂಡೋ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ದೇಶದಲ್ಲಿ ನೂತನ ಪ್ರಧಾನಿ ಯಾರು? ಎಂಬ ಚರ್ಚೆ ಜೋರಾಗಿತ್ತು. ಮಧ್ಯಂತರ ಸರ್ಕಾರ ರಚನೆಗೊಂಡಾಗ ಪ್ರಧಾನಿಯಾದ ಮಾರ್ಕ್ ಕ್ಯಾರ್ನಿ ಚುನಾವಣೆ ನಡೆದಾಗ ಪಕ್ಷವನ್ನು ಅಧಿಕಾರಕ್ಕೆ ಸಹ ತಂದರು.
ಜಪಾನ್‌ನಲ್ಲಿಯೂ ಪ್ರಧಾನಿ ಬದಲಾವಣೆ: ಕೆನಡಾ ಮಾದರಿಯಲ್ಲಿ ಜಪಾನ್‌ನಲ್ಲಿಯೂ ಪ್ರಧಾನಿ ಬದಲಾವಣೆ ಆಯಿತು. ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿರುವ ಜಪಾನ್‌ನಲ್ಲಿ ರಾಜಕೀಯ ಅಸ್ಥಿರತೆ ಕಂಡು ಬಂದಿತು. ಲಿಬರಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಸನೇ ತಕೈಚಿ ಅಕ್ಟೋಬರ್‌ನಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಹಲವು ಚುನಾವಣೆಗಳಲ್ಲಿ ಪಕ್ಷ ಸೋಲು ಕಂಡಿದ್ದರಿಂದ 2024ರಲ್ಲಿ ಪ್ರಧಾನಿಯಾಗಿದ್ದ ಶಿಗೇರು ಇಶಿಬಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನೇಪಾಳದಲ್ಲಿ ಗಲಭೆ: ಭಾರತದ ಪಕ್ಕದ ನೇಪಾಳದಲ್ಲಿ ಸಾಮಾಜಿಕ ಜಾಲತಾಣಗನ್ನು ನಿರ್ಬಂಧಗೊಳಿಸಿದ ಕಾರಣ ಪ್ರಾರಂಭವಾದ ಗಲಭೆ ಸರ್ಕಾರದ ಪತನದ ತನಕ ಸಾಗಿತು. ಶ್ರೀಲಂಕಾ, ಬಾಂಗ್ಲಾದೇಶ ಮಾದರಿಯಲ್ಲಿ ಗಲಭೆ, ಹಿಂಸಾಚಾರ ನಡೆಯಿತು. ಜೆನ್-ಝಿಗಳ ಹೋರಾಟ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸರ್ಕಾರ ಪತನವಾಗುವಂತೆ ಮಾಡಿತು.
ಆಡಳಿತ ನಡೆಸುವ ಸರ್ಕಾರದ ವಿರುದ್ಧ ಕೇಳಿ ಬರುತ್ತಿದ್ದ ದುರಾಡಳಿತ, ಭ್ರಷ್ಟಾಚಾರ, ಆರ್ಥಿಕ ಸಮಸ್ಯೆ, ಸಜ್ಜನ ಪಕ್ಷಪಾತದ ವಿರುದ್ಧ ಜೆನ್-ಝಿಗಳು ಹೋರಾಟ ಆರಂಭಿಸಿದರು. ಸದ್ಯ ದೇಶದಲ್ಲಿ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 2026ರ ಮಾರ್ಚ್‌ನಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಜೆನ್-ಝಿಗಳು ಬಾಂಗ್ಲಾದೇಶ, ನೇಪಾಳ ಮಾತ್ರವಲ್ಲ ವಿವಿಧ ರಾಷ್ಟ್ರಗಳಲ್ಲಿ ಹೋರಾಟವನ್ನು 2025ರಲ್ಲಿ ನಡೆಸಿದ್ದಾರೆ. ಇದರಲ್ಲಿ ಪೆರು, ಫಿಲಿಫೈನ್ಸ್, ಇಂಡೋನೇಷ್ಯಾ, ಮಡಗಾಸ್ಕರ್ ಸೇರಿವೆ.
ಒಂದು ವರ್ಷದಲ್ಲಿ 3 ಪ್ರಧಾನಿ ಬದಲು: 2025ರಲ್ಲಿ ಫ್ರಾನ್ಸ್‌ನಲ್ಲಿ ಮೂವರು ಪ್ರಧಾನಿಗಳು ಬದಲಾಗಿದ್ದಾರೆ. ನಿರುದ್ಯೋಗ, ಆರ್ಥಿಕ ಪರಿಸ್ಥಿತಿಯ ಅಭದ್ರತೆ, ಸಾಲದ ಕಾರಣಕ್ಕೆ ರಾಜಕೀಯ ಅಸ್ಥಿರತೆಗೆ ಫ್ರಾನ್ಸ್ ಈ ವರ್ಷ ಸಾಕ್ಷಿಯಾಗಿದೆ. ದೇಶದಲ್ಲಿ ರಾಜಕೀಯ ಸ್ಥಿರತೆ ತರುವುದು ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್ ಅವರಿಗೆ ಸವಾಲಿನ ಕೆಲಸವಾಗಿದೆ.

