ಉದ್ಯಾನ ನಗರಿ ಬೆಂಗಳೂರಿನಲ್ಲಿ ಹಾಡಹಗಲೇ ಮನೆ ದರೋಡೆ ನಡೆದಿದೆ. ತಾವು ಪೊಲೀಸ್ ಎಂದು ಮನೆಗೆ ಬಂದ ಇಬ್ಬರು ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗುರುತು ಸಿಗಬಾರದು ಎಂಬ ಕಾರಣಕ್ಕೆ ಸಿಸಿಟಿವಿ ಡಿವಿಆರ್ ಸಹ ತೆಗೆದುಕೊಂಡು ಹೋಗಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ ಬಡಾವಣೆಯ ನಿವಾಸಿ ಹೊಂಬಾಳೆಗೌಡ ನಿವಾಸಕ್ಕೆ ಸೋಮವಾರ ಮಧ್ಯಾಹ್ನ ಖಾಸಗಿ ಕಾರಿನಲ್ಲಿ ಇಬ್ಬರು ಆಗಮಿಸಿದ್ದರು.
ತಮ್ಮನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್‌ಟೇಬಲ್ ಎಂದು ಪರಿಚಯಿಸಿಕೊಂಡ ಇಬ್ಬರು ಯೂನಿಫಾರ್ಮ ಧರಿಸಿದ್ದರು, ಕೈಯಲ್ಲಿ ಡೈರಿ ಹಿಡಿದಿದ್ದರು. ತಮ್ಮನ್ನು ಯಲಹಂಕ ಠಾಣೆ ಪೊಲೀಸರು ಎಂದು ಹೇಳಿಕೊಂಡಿದ್ದಾರೆ.
ಚಾಕು ತೋರಿಸಿ ದರೋಡೆ: ತನಿಖೆಗಾಗಿ ನಾವು ಆಗಮಿಸಿದ್ದೇವೆ ಎಂದು ಹೇಳಿದ್ದ ಇಬ್ಬರು ಮನೆಯೊಳಗೆ ಬರುತ್ತಿದ್ದಂತೆಯೇ ಚಾಕು ತೋರಿಸಿ ಹೊಂಬಾಳೆಗೌಡ, ಅವರ ಪತ್ನಿ ಮಂಗಳಮ್ಮ ಮತ್ತು ಮೊಮ್ಮಗನಿಗೆ ಬೆದರಿಸಿದ್ದಾರೆ.
ದಂಪತಿಗಳನ್ನು ಕಟ್ಟಿಹಾಕಿ ಮನೆಯೆಲ್ಲಾ ಹುಡುಕಿ ಅರ್ಧ ಕೆಜಿ ಚಿನ್ನವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡಿದ್ದಾರೆ. ಮಂಗಳಮ್ಮ ಧರಿಸಿದ್ದ ತಾಳಿ ಬಿಟ್ಟು ಉಳಿದ ಎಲ್ಲಾ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.
ದರೋಡೆ ಬಳಿಕ ಗುರುತು ಸಿಗಬಾರದು ಎಂಬ ಕಾರಣಕ್ಕೆ ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಮತ್ತು ದಂಪತಿಗಳ ಮೊಬೈಲ್ ಫೋನ್ ಸಹ ತೆಗೆದುಕೊಂಡು ಹೋಗಿದ್ದಾರೆ. ಇಬ್ಬರು ಸಹ ಖಾಕಿ ಧರಿಸಿದ್ದ ಕಾರಣ ದಂಪತಿಗಳು ಅವರು ಪೊಲೀಸರು ಇರಬೇಕು ಎಂದು ನಂಬಿ ಮನೆಯೊಳಗೆ ಸೇರಿಸಿದ್ದಾರೆ.
ಮನೆಯಲ್ಲಿ ಸುಮಾರು 20 ಲಕ್ಷ ಹಣ ಮತ್ತು ಅರ್ಧ ಕೆಜಿ ಚಿನ್ನಾಭರಣ ಇತ್ತು ಎಂದು ದಂಪತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದರು.
ಬಳಿಕ ಪಶ್ಚಿಮ ವಿಭಾಗದ ಡಿಸಿಪಿ ನಾಗೇಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ಪೊಲೀಸರು ರಚನೆ ಮಾಡಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ದರೋಡೆ ಪ್ರಕರಣ ದಾಖಲಾಗಿದೆ. ಇಬ್ಬರು ವ್ಯಕ್ತಿಗಳು ಆಗಮಿಸಿದ ಕಾರಿನ ಕುರಿತು ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಪೊಲೀಸರ ವೇಷದಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿರುವ ಪ್ರಕರಣ ಬೆಂಗಳೂರು ನಗರದಲ್ಲಿ ಅದರಲ್ಲೂ ನಗರದ ಹೊರವಲಯದಲ್ಲಿ ಆತಂಕವನ್ನು ಮೂಡಿಸಿದೆ.

