ಆಸ್ಟ್ರೇಲಿಯಾ : ಪಶ್ಚಿಮ ಆಸ್ಟ್ರೇಲಿಯಾದ ಕಡಲತೀರದಲ್ಲಿ ನಡೆದ ಈ ಘಟನೆ ಈಗ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಆಸ್ಟ್ರೇಲಿಯಾದ ಪರ್ತ್ನ 13 ವರ್ಷದ ಬಾಲಕ ಆಸ್ಟಿನ್ ಅಪೆಲ್ಬೀ, ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ತೇಲಿ ಹೋಗುತ್ತಿದ್ದ ತನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರನ್ನು ರಕ್ಷಿಸಲು ಸತತ 4 ಗಂಟೆಗಳ ಕಾಲ ಈಜಿದ್ದಾನೆ.
ಏನಿದು ಘಟನೆ
ಜನವರಿ 30 ರಂದು ಆಸ್ಟಿನ್ ಕುಟುಂಬ ಕ್ವಿಂಡಾಲಪ್ ಎಂಬಲ್ಲಿ ವಿಹಾರಕ್ಕೆ ತೆರಳಿತ್ತು. ಈ ಸಮಯದಲ್ಲಿ ಬೀಸಿದ ಬಲವಾದ ಗಾಳಿ ಮತ್ತು ಬೃಹತ್ ಅಲೆಗಳು ಆಸ್ಟಿನ್, ಅವನ ತಾಯಿ ಜೊವಾನ್ನೆ (47), ಸಹೋದರ ಬ್ಯೂ (12) ಮತ್ತು ಸಹೋದರಿ ಗ್ರೇಸ್ (8) ಅವರಿದ್ದ ಪ್ಯಾಡಲ್ಬೋರ್ಡ್ ಮತ್ತು ಕಯಾಕ್ ಅನ್ನು ಸಮುದ್ರದ ಒಳಗಡೆ ಎಳೆದುಕೊಂಡು ಹೋಗಿವೆ. ತನ್ನ ಕುಟುಂಬ ಅಪಾಯದಲ್ಲಿದೆ ಎಂದು ಅರಿತ ಆಸ್ಟಿನ್, ತಾಯಿಯ ಬಳಿ ಮಾತನಾಡಿ ದಡಕ್ಕೆ ಹೋಗಿ ಸಹಾಯ ತರುವುದಾಗಿ ತಿಳಿಸಿದನು. ಸಮುದ್ರದ ಕೊರೆಯುವ ಚಳಿಯ ನಡುವೆ ಆತ ಸತತ 4 ಗಂಟೆ ಈಜಿದನು.ಮೊದಲ ಎರಡು ಗಂಟೆಗಳ ಕಾಲ ಲೈಫ್ ಜಾಕೆಟ್ ಧರಿಸಿದ್ದ ಆತ, ಅದು ತನ್ನ ಈಜುವ ವೇಗವನ್ನು ಕುಗ್ಗಿಸುತ್ತಿದೆ ಎಂದು ತಿಳಿದು ಅದನ್ನು ಕಳಚಿ ಸಮುದ್ರಕ್ಕೆ ಎಸೆದು ಮುನ್ನುಗ್ಗಿದನು.ತೀರ ತಲುಪುವ ವೇಳೆಗೆ ಆತ ಸಂಪೂರ್ಣ ಬಳಲಿ ಹೋಗಿದ್ದರೂ, ಸುಧಾರಿಸಿಕೊಂಡು ದಡದಿಂದ 2 ಕಿಲೋಮೀಟರ್ ದೂರ ಓಡಿ ಹೋಗಿ ಫೋನ್ ಮೂಲಕ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದನು.
ರಕ್ಷಣಾ ಕಾರ್ಯಾಚರಣೆ:
ಬಾಲಕ ನೀಡಿದ ಮಾಹಿತಿಯ ಮೇರೆಗೆ ಹೆಲಿಕಾಪ್ಟರ್ ಮತ್ತು ಬೋಟ್ಗಳ ಮೂಲಕ ಶೋಧ ಆರಂಭಿಸಲಾಯಿತು. ರಾತ್ರಿ 8:30ರ ಸುಮಾರಿಗೆ ಆತನ ಕುಟುಂಬವನ್ನು ಪತ್ತೆಹಚ್ಚಿ ರಕ್ಷಿಸಲಾಯಿತು. ಆಸ್ಟಿನ್ ನೀಡಿದ ನಿಖರವಾದ ಮಾಹಿತಿ ರಕ್ಷಣಾ ತಂಡಕ್ಕೆ ಬಹಳ ಸಹಕಾರಿಯಾಯಿತು.
“ಇದು ನನ್ನಿಂದ ಸಾಧ್ಯವಾಗಿದ್ದಲ್ಲ, ಆ ದೇವರೇ ಮಾಡಿಸಿದ್ದು”
ಈ ಸಾಹಸದ ಬಗ್ಗೆ ಮಾತನಾಡಿದ ಬಾಲಕ ಆಸ್ಟಿನ್, “ಆ ಬೃಹತ್ ಅಲೆಗಳ ನಡುವೆ ನಾನು ಈಜಲು ಸಾಧ್ಯವೇ ಇರಲಿಲ್ಲ. ಈಜುತ್ತಿರುವಾಗ ನಾನು ನಿರಂತರವಾಗಿ ದೇವರನ್ನು ಪ್ರಾರ್ಥಿಸುತ್ತಿದ್ದೆ. ಅದು ನನ್ನಲ್ಲಿ ದೇವರೆ ನಡೆಸಿದ ಪವಾಡ. ‘ನಾನು ದೀಕ್ಷೆ (Baptism) ಪಡೆಯುತ್ತೇನೆ, ದಯವಿಟ್ಟು ಕಾಪಾಡು’ ಎಂದು ದೇವರಲ್ಲಿ ಕೇಳಿಕೊಂಡೆ. ‘ಜಸ್ಟ್ ಕೀಪ್ ಸ್ವಿಮ್ಮಿಂಗ್’ (ಈಜುತ್ತಲೇ ಇರು) ಎಂದು ಮನಸ್ಸಿಗೆ ಹೇಳಿಕೊಳ್ಳುತ್ತಿದ್ದೆ” ಎಂದು ಭಾವುಕನಾಗಿ ಹೇಳಿದ್ದಾನೆ. ಸದ್ಯ ಆಸ್ಟಿನ್ ಕುಟುಂಬದ ಸದಸ್ಯರೆಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 13ರ ಬಾಲಕನ ಈ ಅಪ್ರತಿಮ ಸಾಹಸಕ್ಕೆ ಈಗ ‘ಸೂಪರ್ ಹ್ಯೂಮನ್’ ಎಂದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

