ಈಜಿಪ್ಟ್ ರಾಜಧಾನಿಯ ಪಶ್ಚಿಮ ಭಾಗದಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕನಿಷ್ಠ 13 ಜನರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 34 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಕೈರೋ-ಅಸ್ಯುಟ್ ಪಶ್ಚಿಮ ಮರುಭೂಮಿ ಹೆದ್ದಾರಿಯಲ್ಲಿ ವೇಗವಾಗಿ ಬಂದ ಭಾರಿ ಸರಕು ಸಾಗಣೆ ಟ್ರಕ್ ಹಾಗೂ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಪ್ರವಾಸಿ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಬ್ಬಿಣದ ಚೂರುಗಳು ಮತ್ತು ವಾಹನದ ಭಾಗಗಳು ಹೆದ್ದಾರಿಯುದ್ದಕ್ಕೂ ಹರಿದುಬಿದ್ದಿದ್ದವು. ಅಪಘಾತದ ತೀವ್ರತೆಗೆ ಬಸ್ಸಿನ ಆಸನಗಳು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದರೆ, ಬಸ್ಸಿನ ಅವಶೇಷಗಳು ಟ್ರಕ್ನ ಹಿಂಭಾಗಕ್ಕೆ ಸಿಲುಕಿಕೊಂಡಿದ್ದವು.
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕ್ರೇನ್ ನೆರವಿನಿಂದ ಅಪಘಾತಕ್ಕೊಳಗಾದ ವಾಹನಗಳನ್ನು ತೆರವುಗೊಳಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು. ಗಾಯಗೊಂಡವರನ್ನು ತಕ್ಷಣವೇ ಗೀಜಾ ನಗರದ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ನಿಖರವಾದ ಕಾರಣ ಏನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೆಚ್ಚುತ್ತಿರುವ ರಸ್ತೆ ಅಪಘಾತಗಳು
ಈಜಿಪ್ಟ್ನಲ್ಲಿ ಅಜಾಗರೂಕ ಚಾಲನೆ, ವಾಹನಗಳ ಕಳಪೆ ನಿರ್ವಹಣೆ ಮತ್ತು ಸಂಚಾರ ನಿಯಮಗಳ ಸಡಿಲ ಜಾರಿಯಿಂದಾಗಿ ರಸ್ತೆ ಅಪಘಾತಗಳು ಸರ್ವೇ ಸಾಮಾನ್ಯ ಎಂಬಂತಾಗಿವೆ. ಅಲ್ಲಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷವೊಂದರಲ್ಲೇ ದೇಶದಾದ್ಯಂತ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 6,000 ಜನರು ಜೀವ ಕಳೆದುಕೊಂಡಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಇಂತಹ ದುರಂತಗಳು ಹೆಚ್ಚುತ್ತಿದ್ದು, ಕಳೆದ ತಿಂಗಳು ಸಿನೈ ಪ್ರದೇಶದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ 10 ಜೋರ್ಡಾನ್ ಪ್ರವಾಸಿಗರು ಸೇರಿದಂತೆ 22 ಜನರು ಮೃತಪಟ್ಟಿದ್ದರು. ಅದೇ ರೀತಿ ಆಗಸ್ಟ್ ತಿಂಗಳಲ್ಲಿ ಉತ್ತರ ಈಜಿಪ್ಟ್ನಲ್ಲಿ ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಎರಡು ಪಿಕಪ್ ಟ್ರಕ್ಗಳು ಡಿಕ್ಕಿಯಾಗಿ ಹಲವು ಮಕ್ಕಳು ಸೇರಿದಂತೆ 18 ಜನರು ಪ್ರಾಣ ಕಳೆದುಕೊಂಡಿದ್ದರು.

