ಪ್ರತಿಯೊಬ್ಬ ಮಹಿಳೆಯೂ ತನ್ನದೇ ಆದ ಆದಾಯ ಹೊಂದಬೇಕು, ಕುಟುಂಬದ ಆರ್ಥಿಕ ಜವಾಬ್ದಾರಿಯಲ್ಲಿ ಕೈಜೋಡಿಸಬೇಕು ಹಾಗೂ ಯಾರ ಮೇಲೂ ಅವಲಂಬಿತರಾಗದೆ ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಕನಸು ಕಾಣುತ್ತಾರೆ. ಆದರೆ ಮನೆಯ ಜವಾಬ್ದಾರಿ, ಮಕ್ಕಳ ಆರೈಕೆ ಮತ್ತು ಕುಟುಂಬದ ಕೆಲಸಗಳ ನಡುವೆ ಹೊರಗೆ ಹೋಗಿ ಉದ್ಯೋಗ ಮಾಡುವುದು ಅನೇಕರಿಗೆ ಸಾಧ್ಯವಾಗುವುದಿಲ್ಲ. ಇಂತಹ ಮಹಿಳೆಯರಿಗೆ ಭಾರತೀಯ ಜೀವ ವಿಮಾ ನಿಗಮದ (LIC) ಬಿಮಾ ಸಖಿ ಯೋಜನೆ ಹೊಸ ಭರವಸೆಯಾಗಿದೆ.
ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು, ಗೃಹಿಣಿಯರು ಹಾಗೂ ಸ್ವಂತ ದುಡಿಮೆಯಿಂದ ಬದುಕು ಕಟ್ಟಿಕೊಳ್ಳಲು ಬಯಸುವವರಿಗೆ ಈ ಯೋಜನೆ ಉತ್ತಮ ಅವಕಾಶ ಒದಗಿಸುತ್ತದೆ. ಕೇವಲ 10ನೇ ತರಗತಿ ಉತ್ತೀರ್ಣರಾಗಿದ್ದರೆ ಸಾಕು, ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಯಾವುದೇ ದೊಡ್ಡ ಮೊತ್ತದ ಆರಂಭಿಕ ಹೂಡಿಕೆಯ ಅಗತ್ಯವಿಲ್ಲದೆ, ತರಬೇತಿ ಪಡೆದು ಎಲ್ಐಸಿ ಏಜೆಂಟರಾಗಿ ಕೆಲಸ ಮಾಡುವ ಅವಕಾಶವೂ ದೊರೆಯುತ್ತದೆ.
ಮಹಿಳೆಯರ ಕೈಹಿಡಿಯುವ ಬಿಮಾ ಸಖಿ ಯೋಜನೆ
ಹಲವು ಮಹಿಳೆಯರಿಗೆ ಕೆಲಸ ಮಾಡುವ ಆಸಕ್ತಿ ಇದ್ದರೂ ಸೂಕ್ತ ಅವಕಾಶಗಳ ಕೊರತೆಯಿಂದ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಇದೆ. ಅಂತಹ ಮಹಿಳೆಯರು ತಮ್ಮ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಂಡು ಆದಾಯ ಗಳಿಸಲು ಬಿಮಾ ಸಖಿ ಯೋಜನೆ ನೆರವಾಗಬಹುದು.
ಈ ಯೋಜನೆಯಡಿ ಆಯ್ಕೆಯಾಗುವ ಮಹಿಳೆಯರಿಗೆ ಮೊದಲ ಮೂರು ವರ್ಷಗಳವರೆಗೆ ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ. ಇದರೊಂದಿಗೆ ವಿಮಾ ಪಾಲಿಸಿಗಳ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತದೆ. ಇದರಿಂದ ಮಹಿಳೆಯರು ಹೊಸ ಕೌಶಲ್ಯ ಕಲಿಯುವುದರ ಜೊತೆಗೆ ಆರ್ಥಿಕವಾಗಿ ಸ್ವತಂತ್ರರಾಗಲು ಹೆಜ್ಜೆ ಇಡಬಹುದು.
ಮೊದಲ ಮೂರು ವರ್ಷ ಕೈತುಂಬಾ ಆದಾಯ!
ಈ ಯೋಜನೆಯ ಪ್ರಮುಖ ಆಕರ್ಷಣೆಯೇ ಮೂರು ವರ್ಷಗಳವರೆಗೆ ಸಿಗುವ ಮಾಸಿಕ ಸ್ಟೈಪೆಂಡ್.
-
ಮೊದಲ ವರ್ಷ: ತಿಂಗಳಿಗೆ ₹7,000
-
ಎರಡನೇ ವರ್ಷ: ತಿಂಗಳಿಗೆ ₹6,000
-
ಮೂರನೇ ವರ್ಷ: ತಿಂಗಳಿಗೆ ₹5,000
ಇದರ ಜೊತೆಗೆ ನಿಗದಿತ ಗುರಿಗಿಂತ ಹೆಚ್ಚಿನ ಪಾಲಿಸಿಗಳನ್ನು ಮಾರಾಟ ಮಾಡಿದರೆ ಹೆಚ್ಚುವರಿ ಕಮಿಷನ್ ಗಳಿಸುವ ಅವಕಾಶವೂ ಇದೆ. ಅಂದರೆ, ಮಹಿಳೆಯರು ತಮ್ಮ ಕೆಲಸದ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದು.
ವಯಸ್ಸು, ವಿದ್ಯಾರ್ಹತೆ ಅಡ್ಡಿಯಾಗಬೇಕಿಲ್ಲ!
ದೊಡ್ಡ ಪದವಿ ಅಥವಾ ಹೆಚ್ಚಿನ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. 18ರಿಂದ 70 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಭಾಗದ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ಮನೆಯಲ್ಲೇ ಕುಳಿತುಕೊಳ್ಳುವುದಕ್ಕಿಂತ ಸ್ವಂತ ಆದಾಯ ಏಕೆ ಬೇಡ?
ತಮ್ಮದೇ ಆದ ಆದಾಯವಿದ್ದರೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕುಟುಂಬದ ಸಣ್ಣಪುಟ್ಟ ಖರ್ಚುಗಳಿಗೆ ಇತರರನ್ನು ಅವಲಂಬಿಸುವ ಅಗತ್ಯ ಕಡಿಮೆಯಾಗುತ್ತದೆ. ಮಕ್ಕಳ ಶಿಕ್ಷಣ, ಮನೆ ನಿರ್ವಹಣೆ ಹಾಗೂ ವೈಯಕ್ತಿಕ ಅಗತ್ಯಗಳಿಗೆ ತಮ್ಮ ದುಡಿಮೆಯ ಹಣವನ್ನು ಬಳಸಿಕೊಳ್ಳಬಹುದು.
ಬಿಮಾ ಸಖಿ ಯೋಜನೆಯಂತಹ ಅವಕಾಶಗಳು ಮಹಿಳೆಯರಿಗೆ ಕೇವಲ ಹಣ ಗಳಿಸುವ ಮಾರ್ಗವಷ್ಟೇ ಅಲ್ಲ, ಹೊಸ ಜನರನ್ನು ಪರಿಚಯಿಸಿಕೊಳ್ಳಲು, ಸಂವಹನ ಕೌಶಲ್ಯ ಬೆಳೆಸಿಕೊಳ್ಳಲು ಮತ್ತು ವೃತ್ತಿಜೀವನ ಆರಂಭಿಸಲು ಸಹ ನೆರವಾಗಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮಹಿಳೆಯರು ಎಲ್ಐಸಿಯ ಅಧಿಕೃತ ವೆಬ್ಸೈಟ್ ಮೂಲಕ ಅಥವಾ ಸಮೀಪದ ಎಲ್ಐಸಿ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಪ್ರಕ್ರಿಯೆಯ ಮಾಹಿತಿ ಪಡೆಯಬಹುದು. 10ನೇ ತರಗತಿಯ ಅಂಕಪಟ್ಟಿ, ಆಧಾರ್ ಕಾರ್ಡ್, ವಿಳಾಸದ ಪುರಾವೆ ಮತ್ತು ವಯಸ್ಸಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಗಮನಿಸಿ: ಸ್ಟೈಪೆಂಡ್ ಪಡೆಯಲು ಎಲ್ಐಸಿ ನಿಗದಿಪಡಿಸಿರುವ ತರಬೇತಿ, ಕಾರ್ಯಕ್ಷಮತೆ ಹಾಗೂ ಇತರ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ನಿಯಮಗಳನ್ನು ಪರಿಶೀಲಿಸಿಕೊಳ್ಳಿ.

