ಬೆಂಗಳೂರು : ಬೆಂಗಳೂರಿನ ಜನನಿಬಿಡ ರಸ್ತೆಯಲ್ಲಿ ಹತ್ತು ವರ್ಷದ ಬಾಲಕನೊಬ್ಬ ಸ್ಕೂಟರ್ ಚಲಾಯಿಸುತ್ತಿರುವ ಆಘಾತಕಾರಿ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೀಟಿನ ಮೇಲೆ ಕುಳಿತುಕೊಳ್ಳಲು ಸರಿಯಾಗಿ ಎತ್ತರವಿಲ್ಲದಿದ್ದರೂ, ಟ್ರಾಫಿಕ್ ನಡುವೆ ಜೀವದ ಹಂಗು ತೊರೆದು ಆತ ಮಾಡುತ್ತಿರುವ ಸಾಹಸವು ಪೋಷಕರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಂತಿದೆ. ಈ ಘಟನೆಯು ಕೇವಲ ಸಂಚಾರಿ ನಿಯಮಗಳ ಉಲ್ಲಂಘನೆಯಲ್ಲದೆ, ಮಗುವಿನ ಪ್ರಾಣಕ್ಕೆ ಸಂಚಕಾರ ತರುವಂತಿದ್ದು, ಇಂತಹ ಅಪಾಯಕಾರಿ ಬೆಳವಣಿಗೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯ ಕೇಳಿಬಂದಿದೆ.
10 ವರ್ಷದ ಬಾಲಕ ಸ್ಕೂಟರ್ ಚಲಾಯಿಸುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕನ ವಯಸ್ಸು ಮತ್ತು ಎತ್ತರವನ್ನು ಗಮನಿಸಿದರೆ ಆತನಿಗೆ ಅಬ್ಬಬ್ಬಾ ಎಂದರೆ 10 ವರ್ಷವಿರಬಹುದು. ಈ ದೃಶ್ಯ ಬರೀ ಕಾನೂನು ಉಲ್ಲಂಘನೆಯಲ್ಲ, ಬದಲಿಗೆ ಒಂದು ದೊಡ್ಡ ದುರಂತಕ್ಕೆ ಆಹ್ವಾನ ನೀಡಿದಂತಿದೆ.
ಘಟನೆಯ ವಿವರ: ವಾಹನ ಸಂಖ್ಯೆ KA-04-JU-7038 ರ ಸ್ಕೂಟರ್ನಲ್ಲಿ ಈ ಬಾಲಕ ಕಾಣಿಸಿಕೊಂಡಿದ್ದಾನೆ. ಆತನಿಗೆ ಸೀಟಿನ ಮೇಲೆ ಕುಳಿತು ಗಾಡಿ ಓಡಿಸಲು ಸಾಧ್ಯವಾಗುತ್ತಿಲ್ಲ; ಹಾಗಾಗಿ ಫುಟ್ಬೋರ್ಡ್ ಮೇಲೆ ನಿಂತುಕೊಂಡೇ ಗಾಡಿ ಚಲಾಯಿಸುತ್ತಿದ್ದಾನೆ. ಇನ್ನು ಗಾಡಿ ನಿಲ್ಲಿಸುವಾಗ ಸೀಟಿನಿಂದ ಕೆಳಕ್ಕೆ ಜಿಗಿದು ಸ್ಕೂಟರ್ ಹಿಡಿಯಲು ಹರಸಾಹಸ ಪಡುತ್ತಿದ್ದಾನೆ. ಈ ದೃಶ್ಯವು ರಸ್ತೆಯಲ್ಲಿ ಚಲಿಸುವ ಇತರ ವಾಹನ ಸವಾರರಿಗೂ ದಿಗಿಲು ಹುಟ್ಟಿಸುವಂತಿದೆ.
ಇಲ್ಲಿ ಮಗುವಿಗಿಂತಲೂ ಆತನ ಪೋಷಕರ ಪಾತ್ರವೇ ಹೆಚ್ಚು ಆತಂಕಕಾರಿಯಾಗಿದೆ. ಇಷ್ಟು ಚಿಕ್ಕ ವಯಸ್ಸಿನ ಮಗುವಿಗೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ನೀಡಲು ಹೇಗೆ ಸಾಧ್ಯ? ಇದನ್ನು “ಆಧುನಿಕತೆ” ಅಥವಾ “ಆತ್ಮವಿಶ್ವಾಸ ಬೆಳೆಸುವುದು” ಎಂದು ಕರೆಯುವುದು ಮೂರ್ಖತನವಾಗುತ್ತದೆ. ಇದು ಪೋಷಕರ ಶುದ್ಧ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವಾಗಿದೆ. ರಸ್ತೆಯಲ್ಲಿ ನಡೆಯುವ ಒಂದು ಸಣ್ಣ ತಪ್ಪೂ ಸಹ ಈ ಬಾಲಕನ ಜೀವನವನ್ನೇ ಬಲಿಪಡೆಯಬಹುದು ಅಥವಾ ಇತರರ ಪ್ರಾಣಕ್ಕೆ ಸಂಚಕಾರ ತರಬಹುದು.
ಕಾನೂನು ಕ್ರಮಕ್ಕೆ ಆಗ್ರಹ: ಈಗಾಗಲೇ ಈ ವಿಡಿಯೋವನ್ನು ಬೆಂಗಳೂರು ನಗರ ಪೊಲೀಸ್ ಮತ್ತು ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದ್ದು, ಇಂತಹ ನಿಯಮ ಬಾಹಿರ ಕೃತ್ಯಕ್ಕೆ ಪ್ರೇರೇಪಿಸಿದ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

