ಮಗುವಿಗೆ ಎದೆ ಹಾಲುಣಿಸಲು ತಾಯಂದಿರ ಹಿಂಜರಿಕೆ, ಹೆಚ್ಚುತ್ತಲೇ ಇದೆ ಅಪಾಯಕಾರಿ ಫಾರ್ಮುಲಾ ಮಿಲ್ಕ್‌ ಬಳಕೆ; WHO ಕಳವಳ

ಇತ್ತೀಚಿನ ದಿನಗಳಲ್ಲಿ ತಾಯಂದಿರು ಮಕ್ಕಳಿಗೆ ಎದೆಹಾಲುಣಿಸುವ ಅಭ್ಯಾಸ ಕಡಿಮೆಯಾಗುತ್ತಲೇ ಇದೆ. ಫಾರ್ಮುಲಾ ಮಿಲ್ಕ್‌ ಅತ್ಯಂತ ಸುಲಭವಾಗಿ ಲಭ್ಯವಾಗುತ್ತಿದ್ದು, ಆ ಕಂಪನಿಗಳ ಮಾರ್ಕೆಟಿಂಗ್‌ ಟೆಕ್ನಿಕ್‌ಗೆ ಮರುಳಾಗಿ ತಾಯಂದಿರುವ ಅದನ್ನೇ ಮಕ್ಕಳಿಗೆ ಕುಡಿಸಲಾರಂಭಿಸಿದ್ದಾರೆ. ಆದರೆ ಫಾರ್ಮುಲಾ ಮಿಲ್ಕ್‌ ಶಿಶುಗಳಿಗೆ ಎಷ್ಟು ಅಪಾಯಕಾರಿ ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಈ ಬಗ್ಗೆ WHO ಕೂಡ ಎಚ್ಚರಿಕೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮದ ಪ್ರಕಾರ ಮಕ್ಕಳಿಗೆ 6 ತಿಂಗಳವರೆಗೆ ತಾಯಿಯ ಹಾಲನ್ನು ಮಾತ್ರ ನೀಡಬೇಕು. ಇದಲ್ಲದೆ ಮಗುವಿಗೆ ಹುಟ್ಟಿದ ಮೊದಲ ಗಂಟೆಯಲ್ಲೇ ತಾಯಿಯ ಹಾಲನ್ನು ನೀಡಬೇಕು.

ಆದರೆ ಇದು 50 ಪ್ರತಿಶತ ಪ್ರಕರಣಗಳಲ್ಲಿ ಮಾತ್ರ ಸಂಭವಿಸುತ್ತದೆ.ನವಜಾತ ಶಿಶುವಿಗೆ ತಾಯಿಯ ಹಾಲು ಅತ್ಯುತ್ತಮ ಆಹಾರವಾಗಿದೆ. ಆದರೆ ಫಾರ್ಮುಲಾ ಮಿಲ್ಕ್‌ಗಳ ಮಾರಾಟ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಫಾರ್ಮುಲಾ ಹಾಲನ್ನು ಎದೆ ಹಾಲಿಗೆ ಪರ್ಯಾಯವಾಗಿ ಪರಿಗಣಿಸಲಾಗುತ್ತಿದೆ.ವಿಶ್ವಾದ್ಯಂತ ಫಾರ್ಮುಲಾ ಹಾಲಿನ ಮಾರುಕಟ್ಟೆಯ ವಹಿವಾಟು 55 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು. ಹಸುವಿನ ಹಾಲನ್ನು ಸಂಸ್ಕರಿಸುವ ಮೂಲಕ ಫಾರ್ಮುಲಾ ಹಾಲನ್ನು ತಯಾರಿಸಲಾಗುತ್ತದೆ. ಆದರೆ ತಜ್ಞರ ಪ್ರಕಾರ ಇದನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು.ತಾಯಿಯ ಹಾಲಿನಲ್ಲಿ ಮಾತ್ರ ಗರಿಷ್ಠ ಪೋಷಕಾಂಶಗಳಿರುತ್ತವೆ.

ಮಗುವಿನ ಅಗತ್ಯಕ್ಕೆ ಅನುಗುಣವಾಗಿ ತಾಯಿ ಸಾಕಷ್ಟು ಹಾಲು ನೀಡಬಹುದು. ಎಷ್ಟೋ ಬಾರಿ ಭಯ, ಹಿಂಜರಿಕೆ, ಮಾಹಿತಿಯ ಕೊರತೆಯಿಂದ ತಾಯಂದಿರು ಎದೆಹಾಲುಣಿಸಲು ಹಿಂಜರಿಯುತ್ತಾರೆ. ಯಾವುದೇ ವೈದ್ಯಕೀಯ ಕಾರಣದಿಂದ ತಾಯಿ ಮಗುವಿಗೆ ಹಾಲುಣಿಸಲು ಸಾಧ್ಯವಾಗದಿದ್ದರೆ, ಹಾಲಿನ ಬ್ಯಾಂಕ್‌ನ ಅನ್ನು ಆಶ್ರಯಿಸಬಹುದು. ಹೆಚ್ಚು ಹಾಲು ಉತ್ಪಾದಿಸುವ ತಾಯಂದಿರು ಅದನ್ನು ಸಂಗ್ರಹಿಸಿ ಹಾಲಿನ ಬ್ಯಾಂಕ್‌ಗೆ ದಾನ ಮಾಡಬಹುದು. ಈ ಪರಿಕಲ್ಪನೆಯು ಹೊಸದಾದರೂ ಅನೇಕ ಮಹಾನಗರಗಳಲ್ಲಿದೆ. ತಾಯಿಗೆ ಅನಾರೋಗ್ಯ ಅಥವಾ ಹಾಲು ಉತ್ಪಾದನೆ ಕಡಿಮೆಯಿದ್ದಾಗ ಮಾತ್ರ ಮಗುವಿಗೆ ಫಾರ್ಮುಲಾ ಮಿಲ್ಕ್‌ ಆಯ್ಕೆ ಮಾಡಿಕೊಳ್ಳಬೇಕು.

ಕಳೆದ ಫೆಬ್ರವರಿಯಲ್ಲಿ UNICEF ಸಹಯೋಗದೊಂದಿಗೆ 8500 ಪೋಷಕರು ಮತ್ತು 300 ಆರೋಗ್ಯ ಕಾರ್ಯಕರ್ತರನ್ನು ಸಂದರ್ಶಿಸಲಾಗಿದೆ. ಬಾಂಗ್ಲಾದೇಶ, ಮೆಕ್ಸಿಕೋ, ಮೊರಾಕೊ, ನೈಜೀರಿಯಾ, ದಕ್ಷಿಣ ಆಫ್ರಿಕಾ, ಚೀನಾ, ಬ್ರಿಟನ್‌ ಮತ್ತು ವಿಯೆಟ್ನಾಂನಲ್ಲಿ ಸಂಶೋಧನೆ ನಡೆಸಲಾಯಿತು.ಬ್ರಿಟನ್‌ನಲ್ಲಿ ಶೇ. 84ರಷ್ಟು ತಾಯಂದಿರು ಫಾರ್ಮುಲಾ ಹಾಲಿನ ಬಗ್ಗೆ ತಿಳಿದುಕೊಂಡಿದ್ದಾರೆ. ಚೀನಾದಲ್ಲಿ 97 ಪ್ರತಿಶತ ತಾಯಂದಿರು ಮತ್ತು ವಿಯೆಟ್ನಾಂನಲ್ಲಿ 92 ಪ್ರತಿಶತ ತಾಯಂದಿರಿಗೆ ಈ  ಬಗ್ಗೆ ತಿಳಿ ಹೇಳಲಾಗಿದೆ. ಬಾಂಗ್ಲಾದೇಶದಲ್ಲಿ ಶೇ.98ರಷ್ಟು ಮಹಿಳೆಯರು ಮತ್ತು ಮೊರಾಕೊದಲ್ಲಿ 49 ಪ್ರತಿಶತ ಮಹಿಳೆಯರು ಸ್ತನ್ಯಪಾನವನ್ನು ಮಾತ್ರ ಉತ್ತಮವೆಂದು ಪರಿಗಣಿಸುತ್ತಾರೆ.

ಕಂಪನಿಗಳ ತಪ್ಪು ಪ್ರಚಾರವು ಹುಟ್ಟಿದ ಮೊದಲ ದಿನದಿಂದಲೇ ಫಾರ್ಮುಲಾ ಹಾಲು ಪ್ರಯೋಜನಕಾರಿ ಎಂದು ಸೂಚಿಸುತ್ತದೆ. ಕೇವಲ ಎದೆಹಾಲು ಮಗುವಿನ ಹೊಟ್ಟೆ ತುಂಬುವುದಿಲ್ಲ ಎಂಬ ಪ್ರಚಾರವೂ ಇದೆ. ಫಾರ್ಮುಲಾ ಹಾಲಿನ ಅಂಶಗಳು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಸಹ ಹೇಳಲಾಗುತ್ತದೆ. ಆದರೆ ಸತ್ಯ ಬೇರೆಯೇ ಇದೆ.

ಮಗುವಿಗೆ ಎದೆಹಾಲುಣಿಸುವ ಪ್ರಯೋಜನಗಳು

ಜನನದ ನಂತರ ಮೊದಲ ಗಂಟೆಯಲ್ಲಿ ಸ್ತನ್ಯಪಾನವು ಬಹಳ ಮುಖ್ಯವಾಗಿದೆ. ಮಗುವಿಗೆ 6 ತಿಂಗಳವರೆಗೆ ತಾಯಿಯ ಹಾಲನ್ನು ಹೊರತುಪಡಿಸಿ ಬೇರೇನೂ ಅಗತ್ಯವಿಲ್ಲ. ಇದು ಮಗುವಿನ ಜೀವನಕ್ಕೆ ಪ್ರತಿರಕ್ಷೆಯ ಅಡಿಪಾಯವನ್ನು ಬಲಪಡಿಸುತ್ತದೆ ಮತ್ತು ಸ್ಥೂಲಕಾಯತೆಯನ್ನು ತಡೆಯುತ್ತದೆ. ಸ್ತನ್ಯಪಾನವನ್ನು ಮಗುವಿನ ಮೊದಲ ಲಸಿಕೆ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಅಂಶಗಳು ಮಗುವಿನ ಜನನದ ಸಮಯದಲ್ಲಿ ಅನೇಕ ರೋಗಗಳಿಂದ ರಕ್ಷಿಸಲು ಕೆಲಸ ಮಾಡುತ್ತದೆ.ತಾಯಿ ಮಗುವಿಗೆ ನಿಯಮಿತವಾಗಿ ಹಾಲುಣಿಸಿದರೆ, ಭವಿಷ್ಯದಲ್ಲಿ ಮಧುಮೇಹ, ಬೊಜ್ಜು ಮತ್ತು ಕ್ಯಾನ್ಸರ್ ಬರುವ ಅಪಾಯ ಕಡಿಮೆ. ಆದರೆ ಈ ಎಲ್ಲಾ ಅನುಕೂಲಗಳ ಹೊರತಾಗಿಯೂ, ಶೇ. 44ರಷ್ಟು ತಾಯಂದಿರುವ ಮಾತ್ರ 6 ತಿಂಗಳವರೆಗೆ ಹಾಲುಣಿಸಲು ಸಮರ್ಥರಾಗಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಸ್ತನ್ಯಪಾನವು ಹೆಚ್ಚಿಲ್ಲ, ಆದರೆ ಅದೇ ಅವಧಿಯಲ್ಲಿ ಫಾರ್ಮುಲಾ ಹಾಲಿನ ಮಾರಾಟವು ಎರಡು ಪಟ್ಟು ಹೆಚ್ಚಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read