ಶಿವಮೊಗ್ಗ: ಶಿವಮೊಗ್ಗ ಹೊರವಲಯದ ಗಾಜನೂರು ಸಮೀಪದ ರೆಸಾರ್ಟ್ ವೊಂದರಲ್ಲಿ ವಿದ್ಯುತ್ ಪ್ರವಹಿಸಿ ಮಹಿಳೆ ಮೃತಪಟ್ಟಿದ್ದಾರೆ.
ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದ ನಾಗಮ್ಮ(45) ಮೃತಪಟ್ಟವರು. ರೆಸಾರ್ಟ್ ನಲ್ಲಿ ನಡೆದ ನಿಶ್ಚಿತಾರ್ಥಕ್ಕೆ ಕ್ಯಾಟರಿಂಗ್ ತಂಡದ ಜೊತೆಗೆ ಪಾತ್ರೆ ತೊಳೆಯುವ ಕೆಲಸಕ್ಕಾಗಿ ನಾಗಮ್ಮ ಬಂದಿದ್ದರು. ಮಧ್ಯಾಹ್ನ ಕೆಲಸ ಮುಗಿದ ನಂತರ ತಮ್ಮ ಒದ್ದೆಯಾದ ಬಟ್ಟೆಗಳನ್ನು ಒಣಗಿಸಲು ರೆಸಾರ್ಟ್ ನ ಮುಳ್ಳು ತಂತಿ ಬೇಲಿ ಮೇಲೆ ಹಾಕಲು ಹೋಗಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿದೆ. ತೀವ್ರ ಅಸ್ವಸ್ಥರಾಗಿದ್ದ ನಾಗಮ್ಮ ಅವರನ್ನು ಕೂಡಲೇ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ರೆಸಾರ್ಟ್ ನಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಇದಕ್ಕೆ ಬಳಸಲಾದ ವೈರ್ ಗಳನ್ನು ರೆಸಾರ್ಟ್ ನ ಮುಳ್ಳು ತಂತಿ ಮೇಲೆಯೇ ಮೇಲೆ ಅಳವಡಿಸಲಾಗಿದ್ದು, ಅದರಿಂದ ಶಾರ್ಟ್ ಸರ್ಕ್ಯೂಟ್ ಆಗಿ ಮುಳ್ಳುತಂತಿ ಬೇಲಿಯಲ್ಲಿ ವಿದ್ಯುತ್ ಪ್ರವಹಿಸಿದೆ. ಬಟ್ಟೆ ಒಣಗಿ ಹಾಕಲು ಹೋದ ನಾಗಮ್ಮ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೆಸಾರ್ಟ್ ನವರು ಮುನ್ನೆಚ್ಚರಿಕೆ ವಹಿಸದೆ ವಿದ್ಯುತ್ ವೈರ್ ಗಳನ್ನು ತಂತಿ ಬೇಲಿಗೆ ಹಾಕಿದ್ದು ತಪ್ಪು. ಮೃತರ ಕುಟುಂಬಕ್ಕೆ ರೆಸಾರ್ಟ್ ಮಾಲೀಕರು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

