HomeLatest Newsಆಹಾ........ ಎಂಥಾ ರುಚಿ ಮಾವಿನ ಹಣ್ಣಿನ ಪಲ್ಯ

ಆಹಾ…….. ಎಂಥಾ ರುಚಿ ಮಾವಿನ ಹಣ್ಣಿನ ಪಲ್ಯ

ಮಾವಿನ ಹಣ್ಣುಗಳು ಹಾಗೆಯೇ ತಿನ್ನಲು ಎಷ್ಟು ರುಚಿಯೋ ಹಾಗೆಯೇ ಅದರಿಂದ ತಯಾರಿಸಿದ  ಪದಾರ್ಥಗಳೂ ರುಚಿಯಾಗಿರುತ್ತವೆ. ಮಾವಿನ ಹಣ್ಣಿನ ಪಲ್ಯ ಅಥವಾ ಗ್ರೇವಿಯನ್ನು ಮಾಡಲು ಸ್ವಲ್ಪ ಹುಳಿ-ಸಿಹಿ ಮಿಶ್ರವಾಗಿರುವ ಚಿಕ್ಕ-ಚಿಕ್ಕ ಹಣ್ಣುಗಳು ಅಗತ್ಯವಿರುತ್ತವೆ.

ಈ ಪಲ್ಯವನ್ನು ನಿಮ್ಮ ರುಚಿಗೆ ಅನುಸಾರವಾಗಿ ಸಿಹಿ, ಖಾರ, ಹುಳಿಯಾಗಿ ತಯಾರಿಸಿಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೇಕಾಗುವ ಸಾಮಾಗ್ರಿಗಳು
ಮಾವಿನ ಹಣ್ಣು – 8-10
ಎಣ್ಣೆ – 2 ಚಮಚ
ಸಾಸಿವೆ – 1 ಚಮಚ
ಉದ್ದಿನಬೇಳೆ – 1 ಚಮಚ
ಕೆಂಪು ಮೆಣಸು – 1
ಹಸಿಮೆಣಸು – 1
ಕರಿಬೇವು – ಸ್ವಲ್ಪ
ಇಂಗು – 1/2
ಅರಿಶಿಣ – 1/2 ಚಮಚ
ಉಪ್ಪು – ರುಚಿಗೆ
ಬೆಲ್ಲ – 1/2 ಕಪ್

ಮಾಡುವ ವಿಧಾನ
ಸ್ವಲ್ಪ ಹುಳಿ-ಸಿಹಿಯಿರುವ ಚಿಕ್ಕ ಚಿಕ್ಕ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ತೊಳೆದುಕೊಳ್ಳಿ. ನಂತರ ಅವುಗಳ ತೊಟ್ಟಿನ ಭಾಗವನ್ನು ಕತ್ತರಿಸಿ. ಈಗ ಹಣ್ಣುಗಳನ್ನು ನಾಲ್ಕು ಮೂಲೆಯಲ್ಲಿ ಸಿಗಿದು ಅರ್ಧ-ಅರ್ಧ ಬಿಡಿಸಿಡಿ. ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಸ್ವಲ್ಪ ಬಿಸಿಯಾದ ನಂತರ 2 ಚಮಚ ಎಣ್ಣೆ ಹಾಕಿ. ನಂತರ 1 ಚಮಚ ಸಾಸಿವೆ ಹಾಕಿ ಅದು ಸಿಡಿಯಲು ಆರಂಭವಾದಾಗ 1 ಚಮಚ ಉದ್ದಿನಬೇಳೆ, 1 ಕತ್ತರಿಸಿದ ಕೆಂಪು ಮೆಣಸು, 1/2 ಚಮಚ ಇಂಗು, ಕರಿಬೇವಿನ ಎಲೆಯನ್ನು ಹಾಕಿ ಹುರಿಯಿರಿ.

ಈಗ ಅದಕ್ಕೆ 1/2 ಚಮಚ ಅರಿಶಿಣ, 1 ಕತ್ತರಿಸಿದ ಹಸಿಮೆಣಸನ್ನು ಹಾಕಿ ಹುರಿದ ನಂತರ 1 ಕಪ್ ನೀರನ್ನು ಹಾಕಿ. ನಂತರ 1/2 ಕಪ್ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೆಲ್ಲ ಕರಗುವವರೆಗೆ ಕುದಿಸಿ.

2-3 ನಿಮಿಷಗಳ ನಂತರ ಅರ್ಧ ಸಿಪ್ಪೆ ಸುಲಿದ ಮಾವಿನ ಹಣ್ಣುಗಳನ್ನು ಈ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಧ್ಯಮ ಉರಿಯಲ್ಲಿ ಬೇಯಿಸಿದರೆ ರುಚಿಯಾದ ಮಾವಿನ ಹಣ್ಣಿನ ಪಲ್ಯ ಅಥವಾ ಗ್ರೇವಿ ಸಿದ್ಧವಾಗುತ್ತದೆ. ಇದನ್ನು ಅನ್ನ, ಚಪಾತಿ ಅಥವಾ ದೋಸೆಯೊಂದಿಗೆ ಸೇವಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular