HomeKarnatakaವೆಜ್ ಬದಲಿಗೆ ನಾನ್ ವೆಜ್ ಬರ್ಗರ್ ನೀಡಿದ ಜೊಮ್ಯಾಟೊ, ಹೋಟೆಲ್ ಮಾಲೀಕರಿಗೆ ದಂಡ

ವೆಜ್ ಬದಲಿಗೆ ನಾನ್ ವೆಜ್ ಬರ್ಗರ್ ನೀಡಿದ ಜೊಮ್ಯಾಟೊ, ಹೋಟೆಲ್ ಮಾಲೀಕರಿಗೆ ದಂಡ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವೆಜ್ ಬರ್ಗರ್ ಬದಲಿಗೆ ಮಾಂಸಾಹಾರಿ(ನಾನ್‌ವೆಜ್) ಬರ್ಗರ್ ತಲುಪಿಸಿ ಸೇವಾ ನ್ಯೂನತೆ ಎಸಗಿದ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೊ (Zomato) ಮತ್ತು ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿದೆ.

 ಈ ಪ್ರಕರಣದಲ್ಲಿ ದೂರುದಾರರ ಪರವಾಗಿ ಪ್ರಮುಖ ವಕೀಲ ಚಾಂದ್  ಎಸ್. ಅವರು ವಾದ ಮಂಡಿಸಿದ್ದರು. ಘಟನೆಯ ಹಿನ್ನೆಲೆ ಶಿವಮೊಗ್ಗ ನಗರದ ಜೆ.ಪಿ.ಎನ್ ರಸ್ತೆ ನಿವಾಸಿಯಾದ ನಂದೀಶ್ ಎಂಬುವವರು 2025ರ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬದ ದಿನದಂದು ಜೊಮ್ಯಾಟೊ ಆ್ಯಪ್ ಮೂಲಕ ₹313.15 ಪಾವತಿಸಿ ಸಸ್ಯಾಹಾರಿ ಬರ್ಗರ್ ಆರ್ಡರ್ ಮಾಡಿದ್ದರು.

ಆದರೆ, ಅವರಿಗೆ ಸಸ್ಯಾಹಾರದ ಬದಲಾಗಿ ಮಾಂಸಾಹಾರಿ ಬರ್ಗರ್ ವಿತರಿಸಲಾಗಿತ್ತು. ಗ್ರಾಹಕರು ಈ ಬಗ್ಗೆ ಸಂಸ್ಥೆಗೆ ದೂರು ನೀಡಿದಾಗ, ಜೊಮ್ಯಾಟೊ ಕೇವಲ ಬರ್ಗರ್‌ ನ ಹಣವನ್ನು ಮರುಪಾವತಿಸಿ ಕೈತೊಳೆದುಕೊಂಡಿತ್ತು. ಆದರೆ, ಪವಿತ್ರವಾದ ಗಣೇಶ ಹಬ್ಬದ ದಿನದಂದೇ ಮನೆಯೊಳಗೆ ಮಾಂಸಾಹಾರಿ ಆಹಾರ ತಲುಪಿಸುವ ಮೂಲಕ ತಮ್ಮ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತರಲಾಗಿದೆ ಎಂದು ನಂದೀಶ್ ಅವರು ವಕೀಲರಾದ ಚಾಂದ್ ಎಸ್. ಅವರ ಮೂಲಕ ಶಿವಮೊಗ್ಗ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಂಪನಿಯ ವಾದ ವಿಚಾರಣೆ ವೇಳೆ ಜೊಮ್ಯಾಟೊ ಸಂಸ್ಥೆಯು, “ತಮ್ಮದು ಕೇವಲ ಆರ್ಡರ್ ತೆಗೆದುಕೊಳ್ಳುವ ಆನ್‌ಲೈನ್ ವೇದಿಕೆಯಾಗಿದ್ದು(ಪ್ಲಾಟ್‌ಫಾರ್ಮ್), ಗ್ರಾಹಕರು ನೇರವಾಗಿ ಹೋಟೆಲ್‌ಗೆ ಆರ್ಡರ್ ಮಾಡಿರುತ್ತಾರೆ. ಇದರಲ್ಲಿ ನಮ್ಮ ಯಾವುದೇ ಲೋಪ ಅಥವಾ ಸೇವಾನ್ಯೂನತೆ ಇರುವುದಿಲ್ಲ” ಎಂದು ವಾದಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿತು.

ಆಯೋಗದ ಮಹತ್ವದ ತೀರ್ಪು

ದೂರುದಾರರ ಪರ ವಕೀಲರಾದ ಚಾಂದ್  ಎಸ್. ಅವರು ಮಂಡಿಸಿದ ವಾದ-ಪ್ರತಿವಾದಗಳು, ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗವು ಸಂಸ್ಥೆಯ ಸೇವಾನ್ಯೂನತೆಯನ್ನು ಎತ್ತಿಹಿಡಿಯಿತು.

ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಮತ್ತು ಸದಸ್ಯ ಬಿ. ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಈ ಕೆಳಗಿನಂತೆ ಆದೇಶಿಸಿದೆ:

ಪರಿಹಾರ: ಎದುರುದಾರರಾದ ಜೊಮ್ಯಾಟೊ ಸಿಇಒ(ಗುರುಗ್ರಾಮ, ಹರಿಯಾಣ), ಜೋನಲ್ ಹೆಡ್(ಬೆಂಗಳೂರು) ಮತ್ತು ಶಿವಮೊಗ್ಗದ ಫೈವ್ ಸ್ಟಾರ್ ಹೋಟೆಲ್ ಮಾಲೀಕರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ ₹10,000 ಮಾನಸಿಕ ಅಸಮಾಧಾನ ಹಾಗೂ ತೊಂದರೆಗಾಗಿ ಪರಿಹಾರ ನೀಡಬೇಕು.

ಪ್ರಕರಣದ ವೆಚ್ಚ: ಕಾನೂನು ಹೋರಾಟದ ವೆಚ್ಚವಾಗಿ ಹೆಚ್ಚುವರಿಯಾಗಿ ₹10,000 ಗಳನ್ನು ಪಾವತಿಸಬೇಕು.

ಗಡುವು: ಈ ಒಟ್ಟು ಮೊತ್ತವನ್ನು ಆದೇಶ ಹೊರಬಿದ್ದ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ, ಈ ಮೊತ್ತಕ್ಕೆ ವಾರ್ಷಿಕ ಶೇ. 12ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು ಖಡಕ್ ಆದೇಶ ನೀಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular