ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ವೈರಲ್ ಆಗಿದ್ದು, ನೆಟ್ಟಿಗರು ಪೂಜಾರಿ ರಮಣ ಮೂರ್ತಿ ಎಂಬುವರಿಗೆ ಬಿಜೆಪಿ ಕಾರ್ಯಕರ್ತನೊಬ್ಬ ಸುದ್ದಿ ವಾಹಿನಿಯ ಲೈವ್ ಚರ್ಚೆಯಲ್ಲೇ ಚಪ್ಪಲಿಯಲ್ಲಿ ಬಾರಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ತೆಲುಗಿನ ಬಿಆರ್‌ಕೆ ನ್ಯೂಸ್ ಚಾನೆಲ್‌ನಲ್ಲಿ ನಡೆಯುತ್ತಿದ್ದ ಚರ್ಚೆಯ ವಿಡಿಯೊ ಇದಾಗಿದ್ದು, ಈ ವೇಳೆ ರಮಣ ಮೂರ್ತಿ ಅವರು ಬಿಜೆಪಿಗರು ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಮೊದಲಿಗೆ ನಿತಿನ್ ನಬಿನ್ ರೋಡ್ ಶೋ ವೇಳೆ ಹನುಮ ವೇಷಧಾರಿಯೊಬ್ಬ ಬಿಜೆಪಿ ಬಾವುಟ ಹಿಡಿದು ಕುಣಿದಿದ್ದನ್ನು ಉಲ್ಲೇಖಿಸಿದ ರಮಣ ಮೂರ್ತಿ ಬಿಜೆಪಿಗರು ಹನುಮಂತನನ್ನು ಇಷ್ಟು ಹೀನಾಯವಾಗಿ ಬಳಸಿಕೊಂಡಿದ್ದಾರೆ ಎಂದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅಪ್ಪಟ ಅಭಿಮಾನಿಗಳು ಮೋದಿ ಜತೆ ಹಿಂದೂ ದೇವರುಗಳನ್ನು ವಿಭಿನ್ನವಾಗಿ ಎಡಿಟ್ ಮಾಡಿರುವ ಫೋಟೊಗಳನ್ನು ತೋರಿಸಿ ಕುಟುಕಿದರು.
ಬಾಲ ರಾಮನನ್ನು ಮೋದಿ ಕೈಹಿಡಿದು ಕರೆದೊಯ್ಯುತ್ತಿರುವ ಫೋಟೊವನ್ನು ತೋರಿಸಿ ನೋಡಿ ಇಲ್ಲಿ ಮೋದಿಯವರೇ ರಾಮನಿಗೆ ದಾರಿ ತೋರಿಸುತ್ತಿದ್ದಾರೆ, ಇನ್ನೊಂದು ಫೋಟೊ ತೋರಿಸಿ ನೋಡಿ ಮೋದಿ ಮೇಲೆ ರಾಮ ಕೈ ಹಾಕಿ ಕುಳಿತಿದ್ದಾರೆ, ಈ ರೀತಿ ಯೇಸು ಟ್ರಂಪ್ ಮೇಲೆ ಕೈ ಹಾಕಿ ಕುಳಿತ ಹಾಗೆ ಅಮೆರಿಕನ್ನರು ಎಡಿಟ್ ಮಾಡಲ್ಲ ಎಂದು ಟೀಕಿಸಿದರು.
ಅಲ್ಲದೇ ಕೃಷ್ಣನ ದಶಾವತಾರದ ಫೋಟೊದಲ್ಲಿ ಒಂದು ತಲೆಯನ್ನು ( ತೆಲುಗಿನಲ್ಲಿ ತಲಕಾಯ ) ತೆಗೆದು ಆ ಜಾಗಕ್ಕೆ ಮೋದಿ ಮುಖ ಹಾಕಿದ್ದಾರೆ, ಇದು ಎಷ್ಟು ಸರಿ ಎಂದು ರಮಣ ಮೂರ್ತಿ ಪ್ರಶ್ನಿಸಿದರು. ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಹಾಕುತ್ತಿದ್ದಂತೆ ಅದೇ ಚರ್ಚೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತ ಕೃಷ್ಣನ ತಲೆ ( ತಲಕಾಯ ) ಎನ್ನಬೇಡ, ಹಾಗೆ ಹೇಳಿದರೆ ಚಪ್ಪಲಿಯಲ್ಲಿ ಹಾಕುತ್ತೇನೆ ಎಂದು ಅವಾಜ್ ಹಾಕಿದ್ದಾನೆ. ಇದಕ್ಕೆ ರಮಣ ಮೂರ್ತಿ ಹೊಡಿ ಎಂದು ಆಹ್ವಾನಿಸಿದ್ದಾರೆ. ತಾಳ್ಮೆ ಕಳೆದುಕೊಂಡ ಆತ ತಾನು ಧರಿಸಿದ್ದ ಚಪ್ಪಲಿ ಕಳಚಿ ರಮಣ ಮೂರ್ತಿ ಅವರ ಮೇಲೆ ಮನ ಬಂದಂತೆ ಥಳಿಸಿದ್ದಾನೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರನ್ನು ಈ ರೀತಿ ಬಳಕೆ ಮಾಡಿದ್ದನ್ನು ಪ್ರಶ್ನಿಸಿದ್ದು ಸರಿ ಇದ್ದು, ಅದಕ್ಕೆ ಚಪ್ಪಲಿಯಲ್ಲಿ ಏಕೆ ಹೊಡೆಯಬೇಕು ಎಂದು ಕೃತ್ಯ ಎಸಗಿದವನ ವಿರುದ್ಧ ಕಿಡಿಕಾರಿದ್ದಾರೆ.
https://x.com/SupriyaShrinate/status/2077613555034337608?s=20

