ಬೆಂಗಳೂರು: 2,000 ಕೋಟಿ ರೂಪಾಯಿ ಮೊತ್ತದ ನಕಲಿ ಐಟಿಸಿ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ವಂಚನೆ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಅವರ ನ್ಯಾಷನಲ್ ಟ್ರಾವೆಲ್ಸ್ ಗೆ ನೋಟಿಸ್ ಜಾರಿ ಮಾಡಲಾಗಿದೆ.
2,000 ಕೋಟಿ ರೂಪಾಯಿ ಮೊತ್ತದ ನಕಲಿ ಐಟಿಸಿ ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಹಗರಣದ ತನಿಖೆಯ ಭಾಗವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿರುವ ಪ್ರಸಿದ್ಧ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ನಕಲಿ ಬಿಲ್‌ಗಳ ಸಾಗಾಟಕ್ಕೆ ನ್ಯಾಷನಲ್ ಟ್ರಾವೆಲ್ಸ್‌ನ ಲಾರಿಗಳನ್ನು ಬಳಸಿಕೊಳ್ಳಲಾದ ಆರೋಪ ಕೇಳಿಬಮ್ದಿದ್ದು, ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.
ಮಹಾರಾಷ್ಟ್ರದ ಗುಜರಿ ವಸ್ತುಗಳ ದಲ್ಲಾಳಿಗಳು ತೆರಿಗೆ ವಂಚಿಸುವ ಸಲುವಾಗಿ ಕರ್ನಾಟಕದಿಂದ ಸ್ಕ್ರ್ಯಾಪ್ ಆಮದು ಮಾಡಿಕೊಳ್ಳುತ್ತಿರುವಂತೆ ನಕಲಿ ಕಂಪನಿಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸುತ್ತಿದ್ದರು. ಮಹಾರಾಷ್ಟ್ರದಲ್ಲಿ ಹೆಚ್ಚು ಬೇಡಿಕೆಯಿರುವ ‘ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್’ ಹೆಸರಿನಲ್ಲಿ ಈ ದಂಧೆ ನಡೆಯುತ್ತಿತ್ತು. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವ ವಾಹನಗಳನ್ನು ಇದಕ್ಕಾಗಿ ಬಳಸಲಾಗುತ್ತಿತ್ತು. ನ್ಯಾಷನಲ್ ಟ್ರಾವೆಲ್ಸ್ ಗುತ್ತಿಗೆ ಪಡೆದಿದ್ದ ಲಾರಿಗಳೂ ಸೇರಿದಂತೆ ತಿಂಗಳಿಗೆ ಸುಮಾರು 20-25 ಭಾರಿ ಸರಕು ಸಾಗಣೆ (HGV) ವಾಹನಗಳಲ್ಲಿ ಸ್ಕ್ರ್ಯಾಪ್ ರವಾನೆಯಾಗುತ್ತಿದೆ ಎಂದು ಸುಳ್ಳು ಇ-ವೇ ಬಿಲ್ ಸೃಷ್ಟಿಸಲಾಗುತ್ತಿತ್ತು. ಆದರೆ ಭೌತಿಕವಾಗಿ ಈ ವಾಹನಗಳಲ್ಲಿ ಯಾವುದೇ ಸ್ಕ್ರ್ಯಾಪ್ ಇರುತ್ತಿರಲಿಲ್ಲ. ಕೇವಲ ನಕಲಿ ಬಿಲ್‌ಗಳು ಮಾತ್ರ ಹಂತ ಹಂತವಾಗಿ ಹಸ್ತಾಂತರಗೊಂಡು ಮಹಾರಾಷ್ಟ್ರ ತಲುಪುತ್ತಿದ್ದವು.
ಬೆಂಗಳೂರಿನಲ್ಲಿ ಟಂಗ್‌ಸ್ಟನ್ ಸ್ಕ್ರ್ಯಾಪ್ ಅಷ್ಟಾಗಿ ಸಿಗದೇ ಇದ್ದರೂ, ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ರಫ್ತಾಗಿರುವ ದಾಖಲೆಗಳು ಸೃಷ್ಟಿಯಾಗಿದ್ದವು. ಸುಮಾರು 217 ಕೋಟಿ ರೂ. ವಹಿವಾಟು ನಡೆಸಿ, 39 ಕೋಟಿ ರೂ. ತೆರಿಗೆ ಬಿಲ್ ಸೃಷ್ಟಿಸಿದ್ದನ್ನು ಗಮನಿಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸಿದಾಗ ವಂಚನೆ ಜಾಲ ಪತ್ತೆಯಾಗಿದೆ.
ಪ್ರಕರಣ ಸಂಬಂಧ ಜನವರಿಯಲ್ಲಿ ಐವರನ್ನು ಬಂಧಿಸಲಾಗಿತ್ತು. ಸದ್ಯ ತನಿಖೆ ಮುಂದುವರಿಸಿರುವ ಅಧಿಕಾರಿಗಳು ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ‘ಎಸ್‌ಕೆಎಸ್ ಟ್ರೇಡರ್ಸ್’ನ ಸಲೀಮುಲ್ಲಾ ಹಾಗೂ ‘ಕೆಎಚ್ ಇ-ವೇಸ್ಟ್ ಸೈಕ್ಲರ್’ನ ಹಸನ್ ಬೇಗ್ ಬಂಧಿತರು.
ಈ ಎರಡು ಸಂಸ್ಥೆಗಳು ಬರೋಬ್ಬರಿ 2,384 ಕೋಟಿ ರೂ. ವಹಿವಾಟು ನಡೆಸಿ, 594 ಕೋಟಿ ರೂ. ಐಟಿಸಿ ಬಿಲ್ ಪಡೆದಿರುವುದು ದೃಢಪಟ್ಟಿದೆ. ಅದರಲ್ಲಿಯೂ ಎಸ್‌ಕೆಎಸ್ ಟ್ರೇಡರ್ಸ್‌ನ ವಹಿವಾಟು ಕೇವಲ ಮೂರು ವರ್ಷಗಳಲ್ಲಿ 50 ಕೋಟಿಯಿಂದ 945 ಕೋಟಿ ರೂ.ಗೆ ಏರಿಕೆಯಾಗಿತ್ತು. ಆದರೆ ಈ ಸಂಸ್ಥೆಗಳಲ್ಲಿ ಯಾವುದೇ ಸರಕು ಸಾಗಾಟವಾಗಲಿ ಅಥವಾ ವ್ಯಕ್ತಿಗಳಾಗಲಿ ಇರಲಿಲ್ಲ. ಒಟ್ಟಾರೆ ತನಿಖೆಯಲ್ಲಿ ಇಂತಹ 127 ನಕಲಿ ಸಂಸ್ಥೆಗಳ ಬೃಹತ್ ಜಾಲ ಪತ್ತೆಯಾಗಿದ್ದು, ಸದ್ಯ ಕೋರ್ಟ್ ಆದೇಶದ ಮೇರೆಗೆ 7 ಜನರನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ. ಈ ಜಾಲದ ನಂಟು ನ್ಯಾಷನಲ್ ಟ್ರಾವೆಲ್ಸ್ ಗೂ ಇರುವ ಆರೋಪ ಹಿನ್ನೆಲೆಯಲ್ಲಿ ತನಿಖೆಯ ಭಾಗವಾಗಿ ನೋಟಿಸ್ ನೀಡಲಾಗಿದೆ.

